ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ: ಸಿಎಂ ಸಿದ್ದರಾಮಯ್ಯ

Political News: ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ. ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ. ಇಂತಹ ಅಸತ್ಯವಾದ ವಿಚಾರವನ್ನು ಮುನ್ನಲೆಗೆ ತಂದು ಬಿಜೆಪಿಯವರು ಸ್ವಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಲಾಗುತ್ತಿದೆ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ ಸುಮಾರು ₹53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 200 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು ₹148 ಲಕ್ಷ ಕೋಟಿ ಹೆಚ್ಚಾಗಿದೆ. ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆ ಹೋಗುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಈ ಯಾವುದೇ ಭರವಸೆಗಳನ್ನು ಮೋದಿಯವರು ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು, ಇಂತಹ ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಇಂದು ನ್ಯಾಯಾಲಯದ ತೀರ್ಪಿನ ಪರವಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಸದನದ ಒಳಗೆ ಮತ್ತು ಹೊರಗೆ ಈ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ. ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author