Tuesday, October 14, 2025

Latest Posts

ನೀರಿನ ಟ್ಯಾಂಕ್‌ನಲ್ಲಿ ಶವ ಪತ್ತೆ – ಅದೇ ನೀರು ಕುಡಿದ ವಿದ್ಯಾರ್ಥಿಗಳು!!!

- Advertisement -

ಉತ್ತರ ಪ್ರದೇಶದ ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ಕಾಂಕ್ರೀಟ್ ನೀರಿನ ಟ್ಯಾಂಕ್‌ನಲ್ಲಿ ಯುವಕನ ಕೊಳೆತ ಶವ ಪತ್ತೆಯಾಗಿದೆ. ಶವವು ಹತ್ತು ದಿನಗಳಷ್ಟು ಹಳೆಯದಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದು, ತೀವ್ರ ದುರ್ವಾಸನೆ ಹಾಗೂ ಶವದ ಸ್ಥಿತಿಯಿಂದ ಈ ಶಂಕೆ ವ್ಯಕ್ತವಾಗಿದೆ.

ಸೋಮವಾರ ಮಧ್ಯಾಹ್ನ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳ ಸಂಬಂಧಿಕರು ನೀರಿನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಆಡಳಿತಕ್ಕೆ ದೂರು ನೀಡಿದ ಬಳಿಕ, ಸ್ವಚ್ಛತಾ ಸಿಬ್ಬಂದಿ ಟ್ಯಾಂಕ್ ತೆರೆಯುತ್ತಿದ್ದರು. ಸ್ಲ್ಯಾಬ್ ತೆರವುಗೊಳಿಸಿದಾಗ, ಟ್ಯಾಂಕ್ ಒಳಗೆ ಕೊಳೆತ ಶವ ಪತ್ತೆಯಾಗಿ ಎಲ್ಲರೂ ಬೆಚ್ಚಿಬಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಶವವು ಗುರುತಿಸಲಾಗದ ಸ್ಥಿತಿಯಲ್ಲಿ ಇದ್ದಿದ್ದು, ಎಲ್ಲ ಪ್ರಮುಖ ಅಂಗಾಂಶಗಳು ಕೊಳೆತು ಹೋಗಿವೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಕೊತ್ವಾಲಿ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿ ಇದೆ.

ಈ ಟ್ಯಾಂಕ್‌ನಿಂದ ಆಸ್ಪತ್ರೆಯ ಮಹಿಳಾ ಮತ್ತು ಪುರುಷರ ವಾರ್ಡ್‌ಗಳು, ಹಾಗೂ ಹೊರರೋಗಿ ವಿಭಾಗದ ಶೌಚಾಲಯಗಳಿಗೆ ನೀರು ಪೂರೈಸಲಾಗುತ್ತಿತ್ತು. ವಿದ್ಯಾರ್ಥಿಗಳು ಅದೇ ನೀರನ್ನ ಕುಡಿಯುತ್ತಿದ್ದರು ಅನ್ನೋದು ಇಡೀ ಘಟನೆಯ ಆತಂಕಕಾರಿ ಅಂಶವಾಗಿದೆ. ಘಟನೆಯ ಬಳಿಕ ವೈದ್ಯಕೀಯ ಕಾಲೇಜಿನ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದಾ ಆಸ್ಪತ್ರೆಯ ಭದ್ರತೆ? ಅನ್ನೋ ಹಾಗಾಗಿದೆ.

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಬರನ್ವಾಲ್ ಅವರನ್ನು ತಕ್ಷಣದ ಪರಿಣಾಮವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ. ಯುವಕನನ್ನು ಕೊಲೆ ಮಾಡಿ ಶವವನ್ನು ಟ್ಯಾಂಕ್‌ಗೂಳಗೆ ಎಸೆದು, ಮೇಲ್ಭಾಗವನ್ನು ಸ್ಲ್ಯಾಬ್ ಹಾಕಿ ಮುಚ್ಚಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನು ಆಧಾರವಾಗಿಸಿಕೊಂಡು ಪ್ರಕರಣವನ್ನು ಕೊಲೆಕೇಸ್‌ ಆಗಿ ದಾಖಲಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss