International News: ಗಾಜಾದಲ್ಲಿ ಇಸ್ರೇಲ್ ಸೈನ್ಯ ಪ್ರತಿದಿನ ದಾಳಿ ಮಾಡುತ್ತಿದ್ದು, ಸಾವು ನೋವು ಸಂಭವಿಸುತ್ತಲೇ ಇದೆ. ಪುಟ್ಟ ಪುಟ್ಟ ಮಕ್ಕಳು, ಮಹಿಳೆಯರು ಸಾವನ್ನಪ್ಪುತ್ತಿದ್ದು, ಶಾಲೆಗೆ ಹೋದ ಮಕ್ಕಳು ಮರಳಿ ಮನೆಗೆ ಬರುತ್ತಾರೆಂಬ ನಂಬಿಕೆ, ಅಲ್ಲಿನ ತಂದೆ ತಾಯಿಯರು ಕಳೆದುಕೊಂಡಿದ್ದಾರೆ. ಅಷ್ಟು ಗಂಭೀರ ಸ್ಥಿತಿ ಗಾಜಾದ್ದಾಗಿದೆ.
ಇದೀಗ ಗಾಜಾದಲ್ಲಿ ಮತ್ತೊಂದು ಕಡೆ ಬಾಂಬ್ ಸ್ಪೋಟ ಸಂಭವಿಸಿದ್ದು, ಅಪ್ಪ ತನಗೆ ಅವಳಿ ಮಕ್ಕಳು ಹುಟ್ಟಿದ ಖುಷಿಯಲ್ಲಿ, ಸರ್ಕಾರಿ ಕಚೇರಿಗೆ ಹೋಗಿ, ಜನನ ಪ್ರಮಾಣ ಪತ್ರ ಮಾಡಿಸಲು ಹೋಗಿದ್ದು, ಆತ ಮರಳಿ ಮನೆಗೆ ಬರುವಷ್ಟರಲ್ಲಿ, ಅವಳಿ ಶಿಶುಗಳು, ಉಳಿದ ಮಕ್ಕಳು, ಪತ್ನಿ, ಅತ್ತೆ ಎಲ್ಲರೂ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ.
ಆತ ಕೈಯಲ್ಲಿ ಜನನ ಪ್ರಮಾಣಪತ್ರ ಹಿಡಿದು ಬಂದು, ಮನೆಯಲ್ಲಾದ ಅನಾಹುತವನ್ನು ನೋಡಿ ಕಣ್ಣೀರಿಟ್ಟಿದ್ದಾನೆ. ಮೊಹಮ್ಮದ್ ಅಬು ಅಲ್ ಕುಮ್ಸನ್ ಎಂಬಾತ ತನ್ನವರನ್ನು ಕಳೆದುಕೊಂಡ ನತದೃಷ್ಟನಾಗಿದ್ದು, ಈತ ಸರ್ಕಾರಿ ಕಚೇರಿಯಲ್ಲಿದ್ದಾಗ, ಇವನ ಮನೆಯ ಅಕ್ಕಪಕ್ಕದವರು ಇವನಿಗೆ ಕಾಲ್ ಮಾಡಿ, ನಿಮ್ಮ ಮನೆಯ್ಲಲಿ ಬಾಂಬ್ ಸ್ಪೋಟವಾಗಿದೆ ಎಂದಿದ್ದಾರೆ.
ವಿಷಯ ತಿಳಿದು ಶಾಕ್‌ನಲ್ಲಿದ್ದ ಮೊಹಮ್ಮದ್ ತಕ್ಷಣ ಮನೆಗೆ ಧಾವಿಸಿದ್ದಾನೆ. ಅಷ್ಟೊತ್ತಿಗಾಗಲೇ ಅನಾಹುತ ನಡೆದು ಹೋಗಿದ್ದು, ಶವದ ಮುಂದೆ ಜನನ ಪ್ರಮಾಣಪತ್ರ ಹಿಡಿದು ಆ ವ್ಯಕ್ತಿ ಅಳುತ್ತಿರುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ.
ಈ ಹಿಂದೆ ಬೇರೆ ಮನೆಯಲ್ಲಿದ್ದ ಮೊಹಮ್ಮದ್, ದಾಳಿಯ ಮುನ್ಸೂಚನೆ ಮೇರೆಗೆ, ಎಲ್ಲರನ್ನೂ ಬೇರೆ ಮನೆಗೆ ಸ್ಥಳಾಂತರಿಸಿದ್ದ. ಆದರೆ ಇದೀಗ ಈತ ತಂಗಿದ್ದ ಮನೆಯ ಮೇಲೆ ಶೆಲ್ ದಾಳಿ ನಡೆದು, ಎಲ್ಲರೂ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಇಸ್ರೇಲ್ ಮತ್ತು ಗಾಜಾ ನಡುವೆ ನಡೆದ ಯುದ್ಧದಲ್ಲಿ 115ಕ್ಕೂ ಹೆಚ್ಚು ನಮಜಾತ ಶಿಶುಗಳು ಸಾವನ್ನಪ್ಪಿದ್ದಾರೆ.