Thursday, July 10, 2025

Latest Posts

ನನ್ನ ಉತ್ತರಾಧಿಕಾರಿಯನ್ನ ನಮ್ಮ ಸಂಸ್ಥೆ ನೇಮಿಸುತ್ತೆ : ಚೀನಾಗೆ ದಲೈಲಾಮಾ ಸವಾಲು

- Advertisement -

ನವದೆಹಲಿ : ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ 90ನೇ ಹುಟ್ಟು ಹಬ್ಬದ ಆಚರಣೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸಮುದಾಯದ ವತಿಯಿಂದ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಈ ನಡುವೆಯೇ ದಲೈ ಲಾಮಾ ಮಹತ್ವದ ಘೋಷಣೆ ಮಾಡಿದ್ದಾರೆ. ತಮ್ಮ ಮರಣದ ಬಳಿಕವೂ ಬೌದ್ಧ ಸಂಸ್ಥೆಯು ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅಲ್ಲದೆ ನನ್ನ ಉತ್ತರಾಧಿಕಾರಿಯನ್ನು ನಮ್ಮ ಸಂಸ್ಥೆಯೇ ನಿರ್ಧರಿಸಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಲಾಮಾ ಉತ್ತರಾಧಿಕಾರಿಯ ಆಯ್ಕೆಯಲ್ಲಿ ಭಾಗವಹಿಸಲು ಕಾಯುತ್ತಿದ್ದ ಚೀನಾಗೆ ಸೆಡ್ಡು ಹೊಡೆದಿದ್ದಾರೆ.

ಈ ಕುರಿತು ವಿಡಿಯೋ ಒಂದರಲ್ಲಿ ಟಿಬೆಟಿಯನ್ ಭಾಷೆಯಲ್ಲಿ ಮಾತನಾಡಿರುವ ಅವರು, 1959ರಲ್ಲಿ ಟಿಬೆಟಿಯನ್ ರಾಜಧಾನಿ ಲಾಸಾದಲ್ಲಿ ಚೀನಾದ ಪಡೆಗಳು ದಂಗೆಯನ್ನು ಹತ್ತಿಕ್ಕಿದಾಗಿನಿಂದ ನಾನು ಮತ್ತು ಸಾವಿರಾರು ಇತರ ಟಿಬೆಟಿಯನ್ನರು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ದೇಶದಿಂದ ಹೊರಬಂದು ಭ್ರಷ್ಟರಾಗಿರುವ ಟಿಬೆಟಿಯನ್ ವಲಸೆಗಾರರು, ಹಿಮಾಚಯ ಪ್ರದೇಶ, ಮಂಗೋಲಿಯಾ, ರಷ್ಯಾ ಮತ್ತು ಚೀನಾದ ಕೆಲವು ಭಾಗಗಳಿಂದ ಬಂದ ಬೌದ್ಧರು ನಮ್ಮ ಪರಂಪರೆ ಮುಂದುವರಿಯಬೇಕೆಂದು ತಿಳಿಸಿದ್ದಾರೆ. ಈ ಎಲ್ಲಾ ವಿನಂತಿಗಳಿಗೆ ಅನುಗುಣವಾಗಿ ದಲೈ ಲಾಮಾ ಅವರ ಸಂಸ್ಥೆ ಮುಂದುವರಿಯುತ್ತದೆ ಎಂದು ನಾನು ದೃಢೀಕರಿಸುತ್ತಿದ್ದೇನೆ ಎಂದು ಅವರು ಭರವಸೆ ನೀಡಿದ್ದಾರೆ.

1959ರ ಲಾಸಾ ದಂಗೆಯ ಬಳಿಕ ಭಾರತದಲ್ಲಿ ಆಶ್ರಯ ಪಡೆದ ದಲೈ ಲಾಮಾ ಅವರು ತಮ್ಮ ಸಂಸ್ಥೆಯ ಮುಂದಿನ ವಾರಸುದಾರಿಕೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಈ ಮೊದಲೇ ಲಾಮಾ ಅವರು ತಮ್ಮ ಆತ್ಮಚರಿತ್ರೆಯಾಗಿರುವ ವಾಯ್ಸ್ ಫಾರ್​ ದಿ ವಾಯ್ಸ್​ಲೆಸ್​ನಲ್ಲಿ ತಮ್ಮ 90ನೇ ಜನ್ಮದಿನಾಚರಣೆಯ ವೇಳೆ ಉತ್ತರಾಧಿಕಾರಿಯ ಬಗ್ಗೆ ಮಹತ್ವದ ಘೋಷಣೆ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಅದರಂತೆ ಇದೀಗ ಅವರ ಹುಟ್ಟುಹಬ್ಬದ ದಿನ ಸಮೀಪಿಸುತ್ತಿದ್ದಂತೆ ಮುಂದಿನ ಉತ್ತರಾಧಿಕಾರಿ ಯಾರೆಂಬ ಕುತೂಹಲ ಮೂಡಿದೆ.

ಇನ್ನೂ ಹಿರಿಯ ಬೌದ್ಧ ಸನ್ಯಾಸಿಯ ಆತ್ಮವು ಸಾವಿನ ಬಳಿಕ ಪುನರ್ಜನ್ಮ ಪಡೆಯುತ್ತದೆ. 1935ರ ಜುಲೈ 6ರಂದು ಈಶಾನ್ಯ ಟಿಬೆಟ್‌ನಲ್ಲಿರುವ ಕೃಷಿ ಕುಟುಂಬದಲ್ಲಿ ಜನಿಸಿದ್ದ ಲಾಮೋ ಧೋಂಡಪ್ ಎರಡೇ ವರ್ಷಕ್ಕೆ 13ನೇ ದಲೈ ಲಾಮಾ ಅವರಿಗೆ ಸೇರಿದ ಆಸ್ತಿಗಳನ್ನು ಸ್ಪಷ್ಟವಾಗಿ ನೀಡಿದಾಗ ಇದೇ ಪುನರ್ಜನ್ಮ ಎಂದು ಟಿಬೆಟಿಯನ್ ಸರ್ಕಾರ ನೇಮಿಸಿದ್ದ ಶೋಧನಾ ತಂಡವು ಖಚಿತಪಡಿಸಿತ್ತು. ಈ ಪ್ರಕ್ರಿಯೆಯ ನಂತರ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಇದು ಟಿಬೆಟಿಯನ್ ಧಾರ್ಮಿಕ ಸಂಪ್ರದಾಯ ಹಾಗೂ ನಂಬಿಕೆಯ ಪ್ರಕಾರ ನಡೆದ ಪ್ರಕ್ರಿಯೆಯಾಗಿತ್ತು.

ಅಲ್ಲದೆ ದಲೈ ಲಾಮಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಚೀನಾ, ದಲೈ ಲಾಮಾ ಅವರ ಪುನರ್ಜನ್ಮವನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕು ಎಂದು ಒತ್ತಾಯಿಸಿದೆ. ದಲೈ ಲಾಮಾ, ಪಂಚೆನ್ ಲಾಮಾ ಮತ್ತು ಇತರ ಮಹಾನ್ ಬೌದ್ಧ ವ್ಯಕ್ತಿಗಳ ಪುನರ್ಜನ್ಮವನ್ನು ಚಿನ್ನದ ಪಾತ್ರೆಯಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಕೇಂದ್ರ ಸರ್ಕಾರವು ಅದಕ್ಕೆ ಅನುಮೋದನೆ ನೀಡಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

18 ನೇ ಶತಮಾನದಲ್ಲಿ ಕ್ವಿಂಗ್ ರಾಜವಂಶದ ಚಕ್ರವರ್ತಿ ಪರಿಚಯಿಸಿದ ವಿಧಾನವನ್ನು ಉಲ್ಲೇಖಿಸಿ. ಚೀನಾ ಸರ್ಕಾರವು ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯದ ನೀತಿಯನ್ನು ಜಾರಿಗೆ ತರುತ್ತದೆ, ಆದರೆ ಧಾರ್ಮಿಕ ವ್ಯವಹಾರಗಳು ಮತ್ತು ಟಿಬೆಟಿಯನ್ ಜೀವಂತ ಬುದ್ಧರ ಪುನರ್ಜನ್ಮವನ್ನು ನೋಡಿಕೊಳ್ಳುವ ವಿಧಾನಗಳಿಗೆ ಕೆಲವೊಂದು ನಿಯಮಗಳಿವೆ ಎಂದು ಮಾವೋ ಹೇಳಿದ್ದಾರೆ. ಆದರೆ ಚೀನಾ ಅವರನ್ನು ಬಂಡಾಯಗಾರ ಮತ್ತು ಪ್ರತ್ಯೇಕತಾವಾದಿ ಎಂದು ಖಂಡಿಸಿದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ದಲೈ ಲಾಮಾ ತಮ್ಮನ್ನು ಸರಳ ಬೌದ್ಧ ಸನ್ಯಾಸಿ ಎಂದು ಬಣ್ಣಿಸಿಕೊಳ್ಳುತ್ತಾರೆ ಎನ್ನುವುದು ಗಮನಾರ್ಹ.

- Advertisement -

Latest Posts

Don't Miss