Thailand News: ನಾವು ನಿಮಗೆ ಆಫೀಸಿನಲ್ಲಿ ಕೆಲಸದ ಒತ್ತಡದಿಂದ ಸಾವನ್ನಪ್ಪುವವರ ಸುದ್ದಿಯನ್ನು ಹಲವು ಬಾರಿ ಹೇಳಿದ್ದೇವೆ. ಈ ಕೆಲ ದಿನಗಳಿಂದಂತೂ ಇಂಥ ಕೇಸ್‌ಗಳು ಹೆಚ್ಚೆಚ್ಚು ನಡೆದಿದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ಮಹಿಳಾ ಉದ್ಯೋಗಿ ತನಗೆ ಆರೋಗ್ಯ ಸರಿಯಿಲ್ಲ, ಕೆಲಸಕ್ಕೆ ರಜೆ ಬೇಕು ಎಂದು ಕೇಳಿದರೂ, ಸಿಕ್ ಲಿವ್ ನಿರಾಕರಿಸಿದ ಬಾಸ್, ಆಫೀಸಿಗೆ ಬರುವಂತೆ ತಾಕೀತು ಮಾಡಿದ್ದಾರೆ. ಆದರೆ ಆ ಮಹಿಳಾ ಉದ್ಯೋಗಿ ಆಫೀಸಿಗೆ ಬಂದು ಅರ್ಧಗಂಟೆಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದ್ದು, ಈ ಉದ್ಯೋಗಿಗೆ ಸೆಪ್ಟೆಂಬರ್ 1ರಿಂದಲೇ ಆರೋಗ್ಯ ಹಾಳಾಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ, ಒಂದು ವಾರ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾಳೆ. ಬಳಿಕ ನಡೆದಾಡಲು ಶಕ್ತಿ ಇಲ್ಲವೆಂದು ಮೂರು ದಿನ ಸಿಕ್ ಲಿವ್ ತೆಗೆದುಕೊಂಡಿದ್ದಾಳೆ. ಆದರೂ ತನ್ನ ಆರೋಗ್ಯ ಸರಿಯಾಗಲಿಲ್ಲ, ನನಗೆ ಮತ್ತೆ ಮೂರು ದಿನ ರಜೆ ಬೇಕು ಎಂದು ಮಹಿಳೆ ರಜೆ ಕೇಳಿದ್ದಾಳೆ.
ಆದರೆ ರಜೆ ತೆಗೆದುಕೊಂಡಿದ್ದು ಹೆಚ್ಚಾಗಿದೆ. ನೀವು ಇಂದು ಆಫೀಸಿಗೆ ಬರಲೇಬೇಕು ಎಂದು ಬಾಸ್ ಹೇಳಿದ್ದಾರೆ. ಹಾಗಾಗಿ ಮಹಿಳೆ, ಆಫೀಸಿಗೆ ಹೋಗಿದ್ದು, ಅರ್ಧ ಗಂಟೆಯೊಳಗೆ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ. ಇನ್ನು ಆಕೆ ಸಿಕ್ ಲಿವ್ ಕೇಳಿದಾಗ ಕೊಡಲಿಲ್ಲವೆಂದು ಉಳಿದ ಉದ್ಯೋಗಿಗಳು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಬಗ್ಗೆ ನೆಟ್ಟಿಗರು ಕೂಡ ಆಕ್ರೋಶ ಹೊರಹಾಕಿದ್ದು, ಇಂಥ ಘಟನೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಕೆಲಸದ ಒತ್ತಡದಿಂದಲೇ ಜನರ ಆರೋಗ್ಯ ಹಾಳಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಾಸ್ ಆದವರು, ತಮ್ಮ ಉದ್ಯೋಗಿಗಳ ಆರೋಗ್ಯಕ್ಕೆ ಬೆಲೆ ಕೊಟ್ಟು, ಕೆಲಸದ ಒತ್ತಡ ಕಡಿಮೆ ಮಾಡುವ ಪ್ರಯತ್ನವನ್ನಾದರೂ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.