ಬೋಗಸ್ ಕಾರ್ಡ್‌ಗಳನ್ನು ಪತ್ತೆ ಮಾಡಲು ಮತ್ತು ಪಡಿತರ ಸೋರಿಕೆಯನ್ನು ತಡೆಯಲು ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಇದೀಗ ಮುಂದಾಗಿದೆ. ಇದರಡಿ ಕಳೆದ 6 ತಿಂಗಳಿಂದ ಯಾವುದೇ ಆಹಾರ ಪದಾರ್ಥಗಳನ್ನು ಪಡೆಯದ ಬಿಪಿಎಲ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಇಲಾಖೆ ತೀರ್ಮಾನಿಸಿದೆ ಅಂತ ಹೇಳಲಾಗ್ತಿದೆ!
ಹೌದು ‘ಸರ್ಕಾರದಿಂದ ಅನ್ನಭಾಗ್ಯ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಿಸಲಾಗುತ್ತಿದ್ದರೂ, ಅಂದಾಜು ಲಕ್ಷಕ್ಕೂ ಅಧಿಕ ಮಂದಿ ಪ್ರತಿ ತಿಂಗಳು ರೇಷನ್ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ಇ-ಕೆವೈಸಿ ಮಾಡಿಸುವ ಸಂದರ್ಭದಲ್ಲಿ, ಕಳೆದ 6 ತಿಂಗಳಿಂದ ಪಡಿತರ ಪಡೆಯದ ಕಾರ್ಡ್‌ಗಳನ್ನು ಗುರುತಿಸಿ ತಾತ್ಕಾಲಿಕವಾಗಿ ರದ್ದುಪಡಿಸಲು ಇಲಾಖೆ ಮುಂದಾಗಿದೆ.
ಅಲ್ಲದೆ, ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿರುವ ಲಕ್ಷಾಂತರ ಅಂತ್ಯೋದಯ ಹಾಗೂ ಬಿಪಿಎಲ್ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಆದೇಶ ಸಹ ಹೊರಡಿಸಲಾಗಿದೆ.
ಕಳೆದ 4 ವರ್ಷಗಳಿಂದ ರೇಷನ್ ಕಾರ್ಡ್‌ಗಳಿಗೆ ಸರಿಯಾಗಿ ಆಧಾರ್ ಜೋಡಣೆ ಕಾರ್ಯ ನಡೆಯದ ಕಾರಣ, ಈ ಅವಧಿಯಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮೃತಪಟ್ಟಿರುವ ಶಂಕೆ ಇದೆ. ಇನ್ನು ಇದರ ಜೊತೆಗೆ ‘ಕೆಲವರು ಮೃತಪಟ್ಟವರ ಹೆಸರಿನಲ್ಲಿಯೂ ರೇಷನ್ ಪಡೆಯುತ್ತಿದ್ದಾರೆ’ ಎಂಬ ಆರೋಪಗಳೂ ಸಹ ಕೇಳಿಬಂದಿವೆ.
ಹಾಗಾಗಿ ‘ಸುಪ್ರೀಂ ಕೋರ್ಟ್ ಆದೇಶ ಹಾಗೂ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ, ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರೂ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ, ಅಲ್ಲಿನ ಲಾಗಿನ್ ಐಡಿ ಮೂಲಕ ಆಧಾರ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ. ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರು ಆದಷ್ಟು ಬೇಗ ಇ-ಕೆವೈಸಿ ಮಾಡಿಸಿ, ನಿಮ್ಮ ಕಾರ್ಡ್ ಅನ್ನು ಸಕ್ರಿಯವಾಗಿಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಪಡಿತರ ಸಿಗದೆ ಕೈತಪ್ಪಿ ಹೋಗಬಹುದು..




