ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ‘ಮೇರಾ ರೇಷನ್‌’ ಅಥವಾ ಇತರೆ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಮಾಡಿಕೊಳ್ಳುವ ಇ-ಕೆವೈಸಿ ಪ್ರಕ್ರಿಯೆಯು ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಸರ್ವರ್‌ನಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹಲವರು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಸುಳ್ಳು ಮಾಹಿತಿ ನಂಬಿ ಮುಖ ಗುರುತಿಸುವಿಕೆ ಮೂಲಕ ಇ-ಕೆವೈಸಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ರಾಜ್ಯದ ತಂತ್ರಾಂಶದೊಂದಿಗೆ ಸಂಪರ್ಕ ಹೊಂದಿಲ್ಲದ ಕಾರಣ, ರಾಜ್ಯದ ಪೋರ್ಟಲ್‌ನಲ್ಲಿ ಇ-ಕೆವೈಸಿ ಇನ್ನೂ ‘ಬಾಕಿ’ ಎಂದೇ ತೋರಿಸುತ್ತದೆ.

ಆದ್ದರಿಂದ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಖುದ್ದಾಗಿ ತೆರಳಿ, ಇ-ಪಿಒಎಸ್ ಯಂತ್ರದಲ್ಲಿ ಬೆರಳಚ್ಚು ಅಥವಾ ಕಣ್ಣಿನ ಪಾಪೆಯ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ಯಾವುದೇ ಸದಸ್ಯರು ಇ-ಕೆವೈಸಿ ಮಾಡಿಸದಿದ್ದರೆ ಅಂತಹವರ ಹೆಸರು ಪಡಿತರ ಚೀಟಿಯಿಂದ ರದ್ದಾಗುವ ಸಾಧ್ಯತೆಯಿದೆ.

ಇಲಾಖೆಯೇ ಸ್ವತಃ ಅಧಿಕೃತ ಆ್ಯಪ್ ಬಿಡುಗಡೆ ಮಾಡುವವರೆಗೆ ಮೂರನೇ ವ್ಯಕ್ತಿಗಳ ಅನಧಿಕೃತ ಆ್ಯಪ್‌ಗಳನ್ನು ನಂಬಬೇಡಿ ಎಂದು ಇಲಾಖೆ ತಿಳಿಸಿದೆ. ಸಾರ್ವಜನಿಕರು ತಮ್ಮ ಕಾರ್ಡ್‌ನ ಇ-ಕೆವೈಸಿ ಸ್ಥಿತಿಯನ್ನು ತಿಳಿಯಲು ಅಧಿಕೃತ ವೆಬ್‌ಸೈಟ್ ಆದ ahara.kar.nic.in ಗೆ ಭೇಟಿ ನೀಡಿ, ‘ಇ-ಸೇವೆಗಳು’ ವಿಭಾಗದಲ್ಲಿ ಪರಿಶೀಲಿಸಿಕೊಳ್ಳಬಹುದು. ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಸೈಬರ್ ವಂಚಕರ ಅಥವಾ ಸುಳ್ಳು ಮಾಹಿತಿಗಳ ಹಾದಿಗೆ ಹೋಗಬೇಡಿ ಎಂದು ಎಚ್ಚರಿಸಲಾಗಿದೆ.

About The Author