ರಾಜ್ಯದಲ್ಲಿ ಅನರ್ಹ BPL ಪಡಿತರ ಚೀಟಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಆಹಾರ ಇಲಾಖೆಯ ಮಹತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪತ್ರಿಕೆಗಳಲ್ಲಿ ವರದಿಯಾದ ಅನರ್ಹ ಪಡಿತರ ಚೀಟಿಗಳ ಕುರಿತು ಸಿಎಂ ಕಣ್ಣಿಟ್ಟಿದ್ದಾರೆ.
ಅನರ್ಹ ಕಾರ್ಡ್‌ಗಳನ್ನು ಯಾವುದೇ ಮುಲಾಜಿಲ್ಲದೆ ತಕ್ಷಣವೇ ರದ್ದುಪಡಿಸಬೇಕು. ಆದರೆ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗಬಾರದು. ಅವರಿಗೆ ಸೌಲಭ್ಯ ಸುಲಭವಾಗಿ ಲಭಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈಗಾಗಲೇ 3,65,614 ಅನರ್ಹ BPL ಚೀಟಿಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ ಅಥವಾ ವರ್ಗ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ನೀಡಲಾಯಿತು.
ಸಿಎಂ ಅವರು, ಅನ್ನಭಾಗ್ಯ ಯೋಜನೆಗೆ ನೂತನ ರೂಪರೇಖೆ ತರುತ್ತಿರುವಂತೆ ಸೂಚನೆ ನೀಡಿದ್ದಾರೆ. ಅಕ್ಕಿಯ ಜೊತೆಗೆ ಪೌಷ್ಟಿಕ ಧಾನ್ಯಗಳು, ಅಗತ್ಯ ಆಹಾರ ಸಾಮಗ್ರಿಗಳ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡುವ ನೂತನ ಯೋಜನೆಗೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಹಾರ ಧಾನ್ಯ ಸಾಗಾಟದಲ್ಲಿ ಪಾರದರ್ಶಕತೆ ಹೆಚ್ಚಿಸಲು ಪ್ರಮುಖ ತಂತ್ರಜ್ಞಾನ ಕ್ರಮಗಳು ಕೈಗೊಳ್ಳಲಾಗಿದೆ. ಎಲ್ಲಾ ಆಹಾರ ಸಾಗಾಟ ವಾಹನಗಳಲ್ಲಿ GPS ಟ್ರಾಕರ್ ಅಳವಡಿಸಲು ನಿರ್ಧಾರ ಮಾಡಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸುವ ಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಆಹಾರಧಾನ್ಯ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 0.29 ಲಕ್ಷ ಮೆಟ್ರಿಕ್ ಟನ್ ಕಿರು ಸಿರಿಧಾನ್ಯಗಳ ಖರೀದಿ ಪ್ರಕ್ರಿಯೆ ಆರಂಭವಾಗಿದೆ.
ವರದಿ : ಲಾವಣ್ಯ ಅನಿಗೋಳ