Thursday, November 13, 2025

Latest Posts

ಬೆಚ್ಚಿಬಿದ್ದ ಬೆಂಗಳೂರು, 60 ದಿನದಲ್ಲಿ 5,664 ಜನರಲ್ಲಿ ಮಾರಕ ಕ್ಯಾನ್ಸರ್ ಪತ್ತೆ!

- Advertisement -

ಕೇವಲ 2 ತಿಂಗಳಲ್ಲಿ ಒಟ್ಟು 5,664 ಕ್ಯಾನ್ಸರ್‌ ಪೀಡಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ‘ಗೃಹ ಆರೋಗ್ಯ’ ಸ್ಕ್ರೀನಿಂಗ್‌ ವೇಳೆ ಇಂತಹ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಈ ಯೋಜನೆಯಡಿ ವಿವಿಧ ಕಾಯಿಲೆಗಳ ತಪಾಸಣೆ ನಡೆಯುತ್ತಿದ್ದು, ಅದರಲ್ಲೇ ಕ್ಯಾನ್ಸರ್‌ ಪತ್ತೆಯ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.

ಗೃಹ ಆರೋಗ್ಯ ಯೋಜನೆಯಡಿ ರಾಜ್ಯದಾದ್ಯಂತ 22 ಲಕ್ಷಕ್ಕೂ ಹೆಚ್ಚು ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 3,403 ಜನರಲ್ಲಿ ಬಾಯಿ ಕ್ಯಾನ್ಸರ್, 1,311 ಜನರಲ್ಲಿ ಸ್ತನ ಕ್ಯಾನ್ಸರ್ ಮತ್ತು 950 ಜನರಲ್ಲಿ ಗರ್ಭಕಂಠದ ಕ್ಯಾನ್ಸರ್‌ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಆರಂಭಿಕ ಹಂತದಲ್ಲಿಯೇ ಪತ್ತೆಯಾದ ಕಾರಣ, ಚಿಕಿತ್ಸೆಯಿಂದ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿನ ಒಟ್ಟು ಪತ್ತೆಯಾದ ಕ್ಯಾನ್ಸರ್‌ ಪ್ರಕರಣಗಳಲ್ಲಿ ಬೆಂಗಳೂರಿನವರೇ ಅತಿ ಹೆಚ್ಚು. ತಜ್ಞರ ಪ್ರಕಾರ, ನಗರ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯವೇ ಇದರ ಪ್ರಮುಖ ಕಾರಣ. ಮಹಾನಗರಗಳಲ್ಲಿ ಕೆಲಸದ ಒತ್ತಡ ಮತ್ತು ಪರಿಸರದ ಪರಿಣಾಮದಿಂದ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 87 ಸಾವಿರ ಹೊಸ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಸ್ತನ ಕ್ಯಾನ್ಸರ್‌, ಗರ್ಭಕಂಠದ ಕ್ಯಾನ್ಸರ್‌ ಮತ್ತು ಬಾಯಿ ಕ್ಯಾನ್ಸರ್‌ ಪ್ರಕರಣಗಳು ಮಹಿಳೆಯರಲ್ಲಿ ಸಾಮಾನ್ಯವಾಗಿ ಪತ್ತೆಯಾಗಿವೆ ಎಂದು ವರದಿ ತಿಳಿಸುತ್ತದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss