ಒಬ್ಬ ಪ್ರೇಮಿ ತನ್ನ ಪ್ರೇಯಸಿಗೆ ಗಿಫ್ಟ್ ಆಗಿ ಹೂವಿನ ಬೊಕ್ಕೆ, ಚಾಕೋಲೇಟ್, ಬಟ್ಟೆ, ಬಳೆ, ಮೇಕಪ್ ಕಿಟ್, ಮೊಬೈಲ್ ಹೀಗೆ ಇನ್ನೂ ಇತ್ಯಾದಿ ಗಿಫ್ಟ್ ಕೊಡಬಹುದು. ಅವನು ಸ್ವಲ್ಪ ಶ್ರೀಮಂತ ಆದ್ರೆ ಗೋಲ್ಡ್ ರಿಂಗ್, ನೆಕ್ಲೆಸ್ ಕೊಡಿಸಬಹುದು. ಅದಕ್ಕೂ ಮೀರಿ ಶ್ರೀಮಂತನಾಗಿದ್ರೆ, ಕಾರ್ ಬಂಗಲೆಯನ್ನ ಗಿಫ್ಟ್ ಆಗಿ ಕೊಡಬಹುದು. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ, ತನ್ನ ಭಾವಿ ಪತ್ನಿಗಾಗಿ ಚಂದ್ರಲೋಕದಲ್ಲಿ ಜಾಗವನ್ನು ಖರೀದಿಸಿ, ಅದನ್ನೇ ಗಿಫ್ಟ್ ಆಗಿ ನೀಡಿದ್ದಾನೆ.
ಗುಜರಾತ್‌ನ ವಡೋದರಾ ಮೂಲದ ಉದ್ಯಮಿಯಾದ ಮಯೂರ್ ಪಟೇಲ್ ಎಂಬಾತ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಹೆಮಾಲಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಹೀಗೆ ನಿಶ್ಚಿತಾರ್ಥದ ಉಡುಗೊರೆ ಎಂದು ವರ ವಧುವಿಗೆ ಏನಾದರೂ ನೀಡಬೇಕಾಗುತ್ತದೆ. ಹಾಗಾಗಿ ಮಯೂರ್, ತಾನು ಮದುವೆಯಾಗಲಿರುವ ಭಾವಿ ಪತ್ನಿಗೆ ಚಂದ್ರಲೋಕದಲ್ಲಿ ಜಾಗ ಖರೀದಿಸಿ, ಆ ಜಾಗವನ್ನೇ ಅವಳ ಹೆಸರಿಗೆ ಬರೆದು, ಗಿಫ್ಟ್ ಆಗಿ ನೀಡಿದ್ದಾನೆ. ಮಯೂರ್, ಚಂದ್ರಲೋಕದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದು, ನಿಶ್ಚಿತಾರ್ಥದ ದಿನವೇ ಆ ಕಾಗದ ಪತ್ರವನ್ನ ಆಕೆಯ ಕೈಗಿತ್ತು, ಸರ್ಪ್ರೈಸ್ ಕೊಟ್ಟಿದ್ದಾನೆ.
ಇದೊಂಥರಾ ಹಳೆ ಪ್ರೇಮಿಯ ಡೈಲಾಗ್‌ಗಿಂತಲೂ ವಿಭಿನ್ನವಾಗಿರುವ ಗಿಫ್ಟಾಗಿದೆ. ನಿನಗಾಗಿ ಸೂರ್ಯ, ಚಂದ್ರನನ್ನೇ ತರುತ್ತೇನೆ ಎನ್ನುವ ಪ್ರಿಯಕರರನ್ನ ಮೀರಿಸಿರುವ ಮಯೂರ್, ಭಾವಿ ಪತ್ನಿಗಾಗಿ ಚಂದ್ರಲೋಕದಲ್ಲೇ ಜಾಗ ಖರೀದಿಸಿಕೊಟ್ಟಿರುವುದು, ವಿಶ್ವದೆಲ್ಲೆಡೆ ಸುದ್ದಿಯಾಗಿದೆ. ಆದ್ರೆ ಅಲ್ಲಿರುವ ಜಾಗದಲ್ಲಿ ಮಯೂರನ ಭಾವಿ ಪತ್ನಿ ಮನೆ ಕಟ್ಟಿಕೊಂಡು ಇರಲಾಗುವುದಿಲ್ಲ. ಯಾಕಂದ್ರೆ ಇದು ಬರೀ ಡಿಜಿಟಲ್ ರೂಪದ ಜಾಗವಾಗಿದೆ. ಯಾಕಂದ್ರೆ ಭೂಮಿ ಬಿಟ್ಟು ಬೇರೆ ಯಾವ ಜಾಗದಲ್ಲೂ ಮನುಷ್ಯ ಜಾಗ ಖರೀದಿಸಬಾರದು ಅನ್ನೋ ನಿಯಮವಿದೆ.