ಚೀನಾದಲ್ಲಿ ನಡೆದ ಶೃಂಗಸಭೆ ಬಳಿಕ, ಭಾರತ-ಚೀನಾ ನಡುವಿನ ಸಂಬಂಧದಲ್ಲಿ ಸುಧಾರಣೆ ಕಾಣ್ತಿದೆ. ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ, ಭಾರತ ಮತ್ತು ಚೀನಾ ದೇಶಗಳ ನಡುವೆ, ನೇರ ವಿಮಾನಯಾನವನ್ನು ಪುನರಾರಂಭಿಸಲು, ಎರಡೂ ದೇಶಗಳು ಒಪ್ಪಿಕೊಂಡಿವೆಯಂತೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ಕೊಟ್ಟಿದೆ.
ಉಭಯ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ನಿರಂತರ ಚರ್ಚೆ ಫಲಪ್ರದವಾಗಿದೆ. ಗೊತ್ತುಪಡಿಸಿದ ಸ್ಥಳಗಳನ್ನು ಸಂಪರ್ಕಿಸುವ, ನೇರ ವಿಮಾನ ಸೇವೆಗಳು ಪುನರಾರಂಭಗೊಳಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮತ್ತು ಪರಿಷ್ಕೃತ ವಾಯು ಸೇವೆಗಳ ಒಪ್ಪಂದದ ಕುರಿತು ತಾಂತ್ರಿಕ ಮಟ್ಟದ ಚರ್ಚೆಯಾಗಿದೆ.
ನಾಗರಿಕ ವಿಮಾನಯಾನ ಅಧಿಕಾರಿಗಳ ಈ ಒಪ್ಪಂದ, ಭಾರತ ಮತ್ತು ಚೀನಾ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಇದು ದ್ವಿಪಕ್ಷೀಯ ವಿನಿಮಯವನ್ನು ಕ್ರಮೇಣ ಸಾಮಾನ್ಯಗೊಳಿಸಲು ಸಹಾಯ ಮಾಡಲಿದೆ.
ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳ ನಂತರ, ಇಂಡಿಗೋ ಚೀನಾದ ಮುಖ್ಯ ಭೂಭಾಗಕ್ಕೆ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ, ಇಂಡಿಗೋ ವಿಮಾನ ಸಂಸ್ಥೆ ಘೋಷಿಸಿದೆ. 2025ರ ಅಕ್ಟೋಬರ್ 26ರಿಂದ ಕೋಲ್ಕತ್ತಾದಿಂದ ಗುವಾಂಗ್ ಝೌಗೆ ನೇರ ವಿಮಾನ ಸೇವೆಯನ್ನು ಆರಂಭಿಸಲಾಗುವುದು. ತನ್ನ ಏರ್‌ಬಸ್ A320 ನಿಯೋ ವಿಮಾನವನ್ನು ಬಳಸುವುದಾಗಿ ಇಂಡಿಗೋ ಹೇಳಿದೆ.
2020ರ ಗಲ್ವಾನ್ ಗಡಿ ಸಂಘರ್ಷ ಮತ್ತು ಕೋವಿಡ್ ಹಾವಳಿಯ ಕಾರಣಕ್ಕೆ, ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಆದ್ರೀಗ ಭಾರತ-ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಣೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸಲು ಒಪ್ಪಿಗೆ ಸೂಚಿಸಿವೆ. ಒಟ್ನಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ, ಚೀನಾ-ಭಾರತ ಮಧ್ಯೆ ನೇರ ವಿಮಾನಯಾನ ಸೇವೆ ಆರಂಭವಾಗ್ತಿದೆ.