Political News: ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ವಂದೇ ಮಾತರಂ 2 ಪ್ಯಾರಾ ಮಾತ್ರ ಹಾಡುವುದು ಎಂದು ನಿನ್ನೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರು.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ಪೂರ್ತಿ ಹಾಡುವುದಿಲ್ಲ ಎನ್ನುವ ಕಾಂಗ್ರೆಸ್ ಧೋರಣೆ, ದೇಶಕ್ಕೆ, ದೇಶ ಭಕ್ತರಿಗೆ ಅವಮಾನ ಮಾತ್ರವಲ್ಲ, ಉದ್ಧಟತನದ ಕಾನೂನುಬಾಹಿರ ಧೋರಣೆ ವಂದೇ ಮಾತರಂ ಪೂರ್ತಿ ಹಾಡುವುದಿಲ್ಲ, ಬೇಕಿದ್ದರೆ “ಜೈಲಿಗೆ ಹಾಕಿ, ನೇಣಿಗೆ ಹಾಕಿ…” ಎನ್ನುವ ಘನ ಕಾಂಗ್ರೆಸ್ ನಾಯಕರ ಮಾತುಗಳು ಕೇವಲ ರಾಜಕೀಯ ಅಸಹನೆ ಮಾತ್ರವಲ್ಲ, ಅದು ಅವರ ಅಲ್ಪಸಂಖ್ಯಾತ ತುಷ್ಟೀಕರಣದ ಸಂಸ್ಕೃತಿಯ ನಿರ್ಲಜ್ಜ ಪ್ರದರ್ಶನ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಅದು ಈ ದೇಶದ ವಿರುದ್ಧ, ಕೋಟ್ಯಂತರ ದೇಶಭಕ್ತರ ವಿರುದ್ಧ, ದೇಶದ ಸಂಸತ್ತು ಮತ್ತು ಸಂವಿಧಾನದ ವಿರುದ್ಧದ ಉದ್ಧಟತನದ ಧ್ವನಿ. ಇತ್ತೀಚೆಗಷ್ಟೇ ಭಾರತದ ಸಂಸತ್ತು ಅಂಗೀಕರಿಸಿ, ಮಾನ್ಯ ರಾಷ್ಟ್ರಪತಿಗಳು ಅಂಕಿತ ಹಾಕಿರುವ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ-2026’ ಪ್ರಕಾರ ‘ವಂದೇ ಮಾತರಂ’ ಗೀತೆಗೆ ನಮ್ಮ ರಾಷ್ಟ್ರಗೀತೆಗಿರುವಷ್ಟೇ ಸಮಾನವಾದ ಶಾಸನಬದ್ಧ ಗೌರವ ಮತ್ತು ರಕ್ಷಣೆ ಲಭಿಸಿದೆ. ಈ ರಾಷ್ಟ್ರೀಯ ಗೀತೆಗೆ ಅಪಮಾನ ಮಾಡುವುದು ಅಥವಾ ಅದರ ಪೂರ್ಣ ಗಾಯನಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧ. ಹೀಗಿರುವಾಗ, ‘ನಾವು ಪೂರ್ಣ ಗೀತೆ ಹಾಡುವುದಿಲ್ಲ’ ಎಂದು ಬಹಿರಂಗವಾಗಿ ಸವಾಲು ಹಾಕುವುದು ಭಾರತೀಯ ಕಾನೂನಿಗೆ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಎಸಗುತ್ತಿರುವ ನೇರ ದ್ರೋಹ! ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ವಂದೇ ಮಾತರಂ’ ಕೇವಲ ಕೆಲವು ಸಾಲುಗಳ ಹಾಡಲ್ಲ; ಅದು ಬಂಕಿಮಚಂದ್ರರ ಲೇಖನಿಯಿಂದ ಮೂಡಿಬಂದು, ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಗಲ್ಲಿಗೇರುವಾಗಲೂ ತುಟಿಯಲ್ಲಿ ಮೊಳಗಿಸಿದ ಪವಿತ್ರ ಮಂತ್ರ. ಅಂದು ಬ್ರಿಟಿಷರ ಲಾಠಿ, ಬಂದೂಕುಗಳಿಗೂ ಜಗ್ಗದ ಈ ಗೀತೆಯನ್ನು ಇಂದು ಕಾಂಗ್ರೆಸ್ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ಖಂಡತುಂಡ ಮಾಡುವುದಕ್ಕೂ ಹಿಂಜರಿಯುವುದಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ‘ಜನಗಣಮನ’ ಮತ್ತು ‘ವಂದೇ ಮಾತರಂ’ ನಡುವೆ ಸುಳ್ಳು ಸಂಘರ್ಷ ಸೃಷ್ಟಿಸಿ ಜನರನ್ನು ವಿಭಜಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಮಾನಸಿಕತೆ, ಅವರ ಕೀಳು ರಾಜಕೀಯ ಉದ್ದೇಶವನ್ನು ಎತ್ತಿಹಿಡಿಯುತ್ತದೆ. ದೇಶದ ಏಕತೆಯ ಸಂಕೇತವಾದ ಗೀತೆಯನ್ನೇ ವಿಭಜಿಸುವವರನ್ನು ಈ ದೇಶದ ವರ್ತಮಾನವೂ ಮನ್ನಿಸುವುದಿಲ್ಲ. ಇತಿಹಾಸವೂ ನಿಮ್ಮನ್ನು ಕ್ಷಮಿಸುವುದಿಲ್ಲ.
ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ಪ್ರಮಾಣ ಮಾಡಿರುವ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ರಾಜ್ಯದ ಜನರಿಗೆ ಸ್ಪಷ್ಟೀಕರಣ ನೀಡಲೇಬೇಕು ಎಂದು ಆಗ್ರಹಿಸುತ್ತೇವೆ. ನೀವು ಭಾರತದ ಕಾನೂನು, ಸಂವಿಧಾನ ಮತ್ತು ‘ವಂದೇ ಮಾತರಂ’ ಗೀತೆಯ ರಾಷ್ಟ್ರೀಯ ಅಸ್ಮಿತೆಯ ಪರವಾಗಿದ್ದೀರಾ ಅಥವಾ ಕಾನೂನನ್ನು ಗಾಳಿಗೆ ತೂರಿ ಸವಾಲು ಹಾಕುವ ಇಂತಹ ದೇಶವಿರೋಧಿ ಧೋರಣೆಯ ಪರವಾಗಿದ್ದೀರಾ? ರಾಷ್ಟ್ರಭಕ್ತಿ ಎನ್ನುವುದು ಯಾರದೋ ಸೌಲಭ್ಯಕ್ಕೆ, ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಐಚ್ಛಿಕ ವಿಷಯವಲ್ಲ! ಭಾರತ ಮಾತೆಯ ಜಯಘೋಷವನ್ನು ರಾಜಕೀಯ ಲಾಭಕ್ಕಾಗಿ ಅಪಮಾನಿಸುವುದನ್ನಾಗಲಿ ಅಥವಾ ದೇಶದ ಶಾಸನಬದ್ಧ ಕಾನೂನನ್ನು ಅವಗಣನೆ ಮಾಡುವುದನ್ನಾಗಲಿ ಕನ್ನಡಿಗರು ಎಂದಿಗೂ ಒಪ್ಪುವುದಿಲ್ಲ ಮತ್ತು ಈ ಕಾಂಗ್ರೆಸಿನ ಖಂಡನೀಯ ಉದ್ಧಟತನವನ್ನು ದೇಶದ ನಾಗರಿಕರು ಕೂಡ ಅಂಗೀಕರಿಸುವುದಿಲ್ಲ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
