Monday, November 17, 2025

Latest Posts

ಅಯ್ಯಯ್ಯೋ ದೇವರಿಗೆ ಜಾತಿಗಣತಿ – ಸಮೀಕ್ಷೆಯಲ್ಲಿ ‘ಮಹಾ’ ಎಡವಟ್ಟು

- Advertisement -

ಬೆಂಗಳೂರಿನಲ್ಲಿ ವಿಚಿತ್ರ ಘಟನೆ ನಡೆದಿದೆ. ಮನುಷ್ಯರಿಗೆ ಜಾತಿಗಣತಿ ಸಮೀಕ್ಷೆ ಆಯ್ತು. ಈಗ ದೇವ್ರಿಗೂ ಜಾತಿಗಣತಿ ಸಮೀಕ್ಷೆ ನಡೆಸ್ತಿದ್ದಾರಾ? ಅನ್ನೋ ಗೊಂದಲ ಶುರುವಾಗಿದೆ. ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುವಂತಹ ವಿಚಿತ್ರ ಎಡವಟ್ಟುಗಳು ಒಂದೊಂದಾಗೆ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿನ ದೇವಾಲಯವೊಂದರ ಮೇಲೆ ಜಾತಿಗಣತಿ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿರುವ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದ SP ರಸ್ತೆ ಸಮೀಪದ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿಯ ವರದಾಂಜನೇಯ ಸ್ವಾಮಿ ದೇವಾಲಯದ ಬಾಗಿಲಿಗೆ ಸಮೀಕ್ಷಾ ಸಿಬ್ಬಂದಿಯಿಂದ UHID ನಂಬರ್ ಹೊಂದಿರುವ ಸ್ಟಿಕ್ಕರ್ ಅಂಟಿಸಲಾಗಿದೆ. ಈ ಘಟನೆ ನೋಡಿದ ದೇವಾಲಯದ ಅರ್ಚಕ ಶಿವಕುಮಾರ್ ದೀಕ್ಷಿತ್ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಲ್ಲಿ ಯಾರೂ ವಾಸಿಸುವುದಿಲ್ಲ. ಇದು ದೇವಾಲಯ. ಮನುಷ್ಯರಂತೆ ದೇವರಿಗೂ ಜಾತಿಗಣತಿ ಸಮೀಕ್ಷೆ ಮಾಡಿದ್ದಾರೆ ಅನ್ಸುತ್ತೆ ಎಂದು ಅರ್ಚಕರು ವ್ಯಂಗ್ಯವಾಡಿದ್ದಾರೆ. ಅವರು ಈ ಘಟನೆಗೆ ಸಂಬಂಧಿಸಿದಂತೆ ಸಮೀಕ್ಷೆ ಸಿಬ್ಬಂದಿಯ ಅಜಾಗರೂಕತೆ ಬಗ್ಗೆ ತೀವ್ರವಾಗಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾದ ಈ ಸಮೀಕ್ಷೆಯು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೇತೃತ್ವದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ತಡವಾಗಿ ಪ್ರಾರಂಭವಾಗಿದ್ದು, 32 ಲಕ್ಷ ಮನೆಗಳನ್ನು ಗುರಿಯಾಗಿಸಲಾಗಿದೆ. ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಯುಎಚ್‌ಐಡಿ ಸ್ಟಿಕ್ಕರ್ ಅಂಟಿಸಿ, 60ಕ್ಕೂ ಹೆಚ್ಚು ಪ್ರಶ್ನೆಗಳ ಮೂಲಕ ಧರ್ಮ, ಜಾತಿ, ಉಪಜಾತಿ, ಆರ್ಥಿಕ ಸ್ಥಿತಿ, ಶಿಕ್ಷಣ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಆದರೆ, ಈ ಸಮೀಕ್ಷೆಯಲ್ಲಿ ಸಾಕಷ್ಟು ಎಡವಟ್ಟುಗಳು ಹೆಚ್ಚಾಗುತ್ತಿವೆ. ದೇವಾಲಯಗಳಂತಹ ಸಾರ್ವಜನಿಕ ಸ್ಥಳಗಳಿಗೆ ಸ್ಟಿಕ್ಕರ್ ಅಂಟಿಸುವುದು, ಯಾರು ಇಲ್ಲದ ಮನೆಗಳಲ್ಲಿ ಸಮೀಕ್ಷೆ ಮಾಡುವುದು ಇತ್ಯಾದಿ ತಪ್ಪುಗಳು ಸಮೀಕ್ಷೆಯ ನಿಖರತೆಗೆ ಧಕ್ಕೆ ತರುತ್ತಿವೆ.

ತಜ್ಞರ ಪ್ರಕಾರ, ಇಂತಹ ತಪ್ಪುಗಳನ್ನು ತಕ್ಷಣ ಸರಿಪಡಿಸದಿದ್ದರೆ ಸಮೀಕ್ಷೆಯ ಅಂತರಂಗದ ನಿಖರತೆ ಪ್ರಶ್ನೆಗೆ ಒಳಪಡುವ ಸಾಧ್ಯತೆ ಇದೆ. ಸರ್ಕಾರವು ಸಮೀಕ್ಷೆಯ ಅವಧಿಯನ್ನು ವಿಸ್ತರಿಸಿದ್ದು, ಶಿಕ್ಷಕರು ಮಧ್ಯಾಹ್ನದ ನಂತರ ಸಮೀಕ್ಷೆ ಮಾಡಲು ಸೂಚಿಸಿದೆ. ಆದರೂ, ಇಂತಹ ತಪ್ಪುಗಳನ್ನು ಸರಿಪಡಿಸಲು ಹೆಚ್ಚಿನ ತರಬೇತಿ ಮತ್ತು ನಿಗಾ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss