415ನೇ ಶ್ರೀರಂಗಪಟ್ಟಣ ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು, ಶ್ರೀರಂಗಪಟ್ಟಣ ದಸರಾ ಉದ್ಘಾಟನೆ ಮಾಡಿದ್ರು. ಇಂದಿನಿಂದ 4 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ. ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ಬಳಿಕ, ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ವಿದ್ಯುಕ್ತ ಚಾಲನೆ ನೀಡಲಾಯ್ತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ರವಿ ಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು.

ಇನ್ನು, ಮಹೇಂದ್ರ ಆನೆ ಮೇಲೆ ಮರದ ಅಂಬಾರಿಯಲ್ಲಿ, ಚಾಮುಂಡೇಶ್ವರಿ ತಾಯಿ ವಿರಾಜಮಾನಳಾಗಿ ಕುಳಿತು ಸಾಗಿದ್ರು. ಮಹೇಂದ್ರಗೆ ಜೊತೆಯಾಗಿ ಕಾವೇರಿ, ಲಕ್ಷ್ಮೀ ಆನೆಗಳು ಹೆಜ್ಜೆ ಹಾಕಿವೆ. ಪೂಜಾ ಕುಣಿತ, ತಮಟೆ, ನಗಾರಿ, ಪಟ್ಟ ಕುಣಿತ, ಹುಲಿವೇಷ, ವೀರಗಾಸೆ, ವೀರ ಭದ್ರಕುಣಿತ, ನಾಸಿಕ್ ಡೊಲಾಟಗಳು ಸೇರಿದಂತೆ ಹಲವು ಜಾನಪದ ಕಲೆಗಳು ನೋಡುಗರ ಮನಸೂರೆಗೊಂಡವು.
ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಭಾರತೀಯ ಬೌದ್ಧ ಮಹಾಸಭಾ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಮಾರಾಟ ನಿಷೇಧ ಮತ್ತು ಅಪರಾಧ, ಅರಣ್ಯ ಇಲಾಖೆಯ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆದವು.
ನಾಡದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.

