ಮನುಷ್ಯನ ಸಮಯ ಒಂದೇ ರೀತಿ ಇರುವುದಿಲ್ಲ. ಬಡವನಾದವನು ಅಚಾನಕ್ಕಾಗಿ ಶ್ರೀಮಂತನಾಗಬಹುದು. ಶ್ರೀಮಂತನಾಗಿದ್ದವನಿಗೂ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಹಾಗಾಗಿ ಶ್ರೀಮಂತಿಕೆಯ ದುರಹಂಕಾರದಿಂದ ಮೆರೆಯಬಾರದು ಅಂತಾ ಹಿರಿಯರು ಹೇಳುತ್ತಾರೆ. ಆದರೆ ನಮಗೆ ಕೆಟ್ಟ ಪರಿಸ್ಥಿತಿ ಏನಾದ್ರೂ ಬಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಅಂತಾ ಚಾಣಕ್ಯರು ಹೇಳುತ್ತಾರೆ. ಯಾವುದು ಆ ವಿಷಯ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶಿಕ್ಷಕರೂ, ವಿದ್ವಾನರೂ ಆಗಿದ್ದ ಚಾಣಕ್ಯರು, ತಮ್ಮ ನೀತಿಯಲ್ಲಿ ಮನುಷ್ಯ ಜೀವನದಲ್ಲಿ ಯಶಸ್ಸು ಗಳಿಸಬೇಕಂದ್ರೆ ಯಾವ ಮಾತನ್ನು ನೆನಪಿನಲ್ಲಿಡಬೇಕು, ಹೇಗೆ ಜೀವನ ನಡೆಸಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯನಿಗೆ ಕೆಟ್ಟ ಪರಿಸ್ಥಿತಿ ಬಂದಾಗ, ಆತ ಗಮನದಲ್ಲಿಡಬೇಕಾದ ವಿಷಯಗಳೇನು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮವರೂ ಪರರಾಗುತ್ತಾರೆ. ಅದೇ ಪರಿಸ್ಥಿತಿ ಅತ್ಯುತ್ತಮವಾಗಿದ್ರೆ, ಧನ ಧಾನ್ಯ ಎಲ್ಲವೂ ಇದ್ರೆ ಪರರೂ ನಮ್ಮವರಂತೆ ವರ್ತಿಸುತ್ತಾರೆ.
ಚಾಣಕ್ಯರ ಪ್ರಕಾರ ಮನುಷ್ಯ ನೆನಪಿನಲ್ಲಿಡಬೇಕಾದ ಮೊದಲ ವಿಷಯವೇನೆಂದರೆ, ನಮಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಯಾರಲ್ಲಿಯೂ ಹೇಳಬೇಡಿ. ನಿಮ್ಮ ಸಂಬಂಧಿಕರ ಬಳಿ ಕೂಡ. ಕೆಲವೊಮ್ಮೆ ನಿಮ್ಮ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೂ ಕೂಡ ನಿಮಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಹೇಳಕೂಡದು. ಯಾಕಂದ್ರೆ ಕೆಲ ಸಂಬಂಧಿಕರು ನಮ್ಮ ಏಳಿಗೆ ಸಹಿಸುವುದಿಲ್ಲ. ಅಂಥವರಿಗೆ ನಮಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ತಿಳಿದರೆ, ಹಾಲು ಕುಡಿದಷ್ಟು ಸಂಭ್ರಮಿಸುತ್ತಾರೆ. ಹಾಗಾಗಿ ನಿಮ್ಮ ಪರಿಸ್ಥಿತಿಯ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ಮತ್ತು ಯಾರ ಎದುರಿಗೂ ಕಣ್ಣೀರು ಹಾಕಬೇಡಿ.
ಎರಡನೇಯದಾಗಿ ಧೈರ್ಯದಿಂದ ಇರಬೇಕು. ಪರಿಸ್ಥಿತಿ ಇದ್ದ ಹಾಗೆ ಇರುವುದಿಲ್ಲ. ಒಂದಲ್ಲ ಒಂದು ದಿನ ನಾನು ಉತ್ತಮನಾಗುತ್ತೇನೆಂಬ ಆತ್ಮ ವಿಶ್ವಾಸ ನಿಮ್ಮಲಿರಬೇಕು. ಅದನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಲಿ, ಅಡ್ಡದಾರಿ ಹಿಡಿಯುವುದಾಗಲಿ ಮಾಡಬಾರದು. ಇದು ಇಂದಿನ ಲಾಕ್ಡೌನ್ ಪರಿಸ್ಥಿತಿಗೆ ಅನ್ವಯಿಸುವ ಮಾತಾಗಿದೆ. ಕೆಲವರಿಗೆ ಪ್ರತಿದಿನ ದುಡಿದರೇನೇ ಜೀವನ. ಹೀಗೆ ಲಾಕ್ಡೌನ್ ಆದ್ರೆ ನಾವೇನು ಮಾಡೋದು..? ನಮ್ಮ ಪರಿಸ್ಥಿತಿ ಏನು ಅನ್ನೋದು ಹಲವರ ಚಿಂತೆಯಾಗಿರತ್ತೆ. 2020ರಲ್ಲಿಲಾಕ್ಡೌನ್ ಆದಾಗ, ಹಲವರು ಮುಂದಿನ ಗತಿ ಏನು ಅಂತಾ ಚಿಂತಿಸಿ, ಚಿಂತಿಸಿ ಆತ್ಮಹತ್ಯೆಗೀಡಾಗಿದ್ದರು.
ಆದ್ರೆ ಇನ್ನು ಕೆಲವರು ಮುಂದಿನ ಪರಿಸ್ಥಿತಿಯ ಬಗ್ಗೆ ಚಿಂತಿಸಿದರೂ, ಲೌಕ್ಡೌನ್ ಸಮಯವನ್ನ ಬಳಸಿಕೊಂಡು ನಿಯತ್ತಾಗಿ ದುಡ್ಡು ಮಾಡಿ, ಒಳ್ಳೆಯ ಜೀವನವನ್ನೂ ಮಾಡಿದರು. ಹಾಗಾಗಿ ಸಕಾರಾತ್ಮಕ ಯೋಚನೆ ಮಾಡಿ ಜೀವನ ಮಾಡಬೇಕು ಅಂತಾ ಚಾಣಕ್ಯರು ಆ ಸಮಯದಲ್ಲೇ ಹೇಳಿದ್ದಾರೆ. ಸುಖ ಮತ್ತು ದುಃಖ ಜೀವನದ ಎರಡು ಚಕ್ರಗಳಿದ್ದಂತೆ. ಒಂದಾದ ಮೇಲೆ ಒಂದು ಬರುವುದೇ ಜೀವನ. ಈಗ ಜೀವನ ಕೆಟ್ಟದ್ದಾಗಿದೆ ಅಂದ್ರೆ ಮುಂದೆ ಒಳ್ಳೆಯದಾಗೇ ಆಗುತ್ತದೆ ಅನ್ನೋ ನಂಬಿಕೆ ನಿಮ್ಮಲಿರಬೇಕು.
ಇನ್ನು ಕೊನೆಯದಾಗಿ ಚಾಣಕ್ಯರು ನಿರ್ಧಾರದ ಬಗ್ಗೆ ಹೇಳಿದ್ದಾರೆ. ಯಾವುದೇ ಸಮಯದಲ್ಲಾಗಲಿ ವ್ಯಕ್ತಿ ಸರಿಯಾದ ನಿರ್ಧಾರ ಮಾಡಬೇಕು. ದುಡುಕಿನ ನಿರ್ಧಾರದಿಂದ ಮನುಷ್ಯನ ಜೀವನವೇ ಹಾಳಾಗುತ್ತದೆ. ಹಾಗಾಗಿ ಯೋಚಿಸಿ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೇ ನಮ್ಮ ಪರಿಸ್ಥಿತಿ ಯಾವಾಗಲೂ ಉತ್ತಮವಾಗಿರುತ್ತದೆ. ಉತ್ತಮವಾಗಿರಲೇಬೇಕು, ನನಗೆ ಒಳ್ಳೆಯದ್ದೇ ಆಗಬೇಕು ಅನ್ನೋ ಮನಸ್ಥಿತಿಯಿಂದ ಮನುಷ್ಯ ಹೊರಬರಬೇಕು. ಮತ್ತು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಯಾವಾಗಲೂ ಸಿದ್ಧನಾಗಿರಬೇಕು ಅಂತಾರೆ ಚಾಣಕ್ಯರು.




