Spiritual: ಮನೆಯಲ್ಲಿ ಮನೆಯೊಡೆಯ ಸರಿಯಾಗಿ ಇದ್ದರೆ, ಅವರಿಗೆ ಸರಿಯಾದ ಜವಾಬ್ದಾರಿ ಇದ್ದರೆ, ಆ ಮನೆಯಲ್ಲಿ ಸದಾ ನೆಮ್ಮದಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರುತ್ತದೆ. ಮನೆ ಮಂದಿಯ ಅವಶ್ಯಕತೆಗಳು ಪೂರೈಕೆಯಾಗುತ್ತದೆ. ಹೀಗೆ ಆಗಬೇಕು ಅಂದ್ರೆ ಮನೆಯೊಡೆಯನಿಗೆ ಕೆಲ ಗುಣಗಳಿರಬೇಕು ಅಂದಿದ್ದಾರೆ ಚಾಣಕ್ಯರು ಆ ಗುಣಗಳೇನು ಅಂತಾ ತಿಳಿಯೋಣ ಬನ್ನಿ..
ಶಿಸ್ತು: ಮನೆಯ ಯಜಮಾನನಿಗೆ ಶಿಸ್ತು ಇದ್ದರೆ ಮಾತ್ರ, ಆ ಮನೆಯ ಮಕ್ಕಳಿಗೆ ಶಿಸ್ತು, ಜವಾಬ್ದಾರಿ ಅನ್ನೋದು ಬರುತ್ತದೆ. ಆದರೆ ಮನೆ ಯಜಮಾನನಿಗೆ ಶಿಸ್ತು ಅನ್ನೋದು ಇಲ್ಲದೇ ಹೋದರೆ, ಮಕ್ಕಳಿಗೆ ಎಂದಿಗೂ ಶಿಸ್ತು, ಜವಾಬ್ದಾರಿ ಅನ್ನೋದು ಬರುವುದಿಲ್ಲ. ಮತ್ತು ಆ ಮನೆಯ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಎಲ್ಲವೂ ಹದಗೆಟ್ಟು ಹೋಗುತ್ತದೆ.
ಜವಾಬ್ದಾರಿಯ ಗುಣ: ಮನೆಯ ಯಜಮಾನನಾದವನಿಗೆ ಜವಾಬ್ದಾರಿ ಇರುವುದು ತುಂಬಾ ಮುಖ್ಯ. ಸಿಕ್ಕ ಸಿಕ್ಕ ಹಾಗೆ ಅವಶ್ಯಕವಲ್ಲದ ವಸ್ತುಗಳಿಗೆ ಹಣ ಖರ್ಚು ಮಾಡಿ, ಮನೆಗೆ ಅವಶ್ಯಕವಿರುವ ವಸ್ತುಗಳನ್ನು ತರದೇ ಕಡೆಗಣಿಸಿದರೆ, ಆ ಮನೆಯಲ್ಲಿ ಎಂದಿಗೂ ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಗಂಡಸಾದವನಿಗೆ ಜವಾಬ್ದಾರಿ ಇರುವುದು ತುಂಬಾ ಮುಖ್ಯ.
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ: ಯಾವುದಾದರೂ ಕೆಲಸದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿದ್ದರೆ, ಯಜಮಾನ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಮನೆ ಮಂದಿಗೆ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕು. ಕೆಲವೊಮ್ಮೆ ಯಜಮಾನನೊಬ್ಬನೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂಥ ಸಮಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರಬೇಕು.
ಪ್ರೀತಿ, ಕಾಳಜಿ ಮಾಡುವ ಗುಣ: ಮನೆಯೊಡೆಯ ಹೇಗಿರಬೇಕು ಅಂದ್ರೆ, ಮನೆಯಲ್ಲಿರುವ ಪ್ರತೀ ಸದಸ್ಯರನ್ನು ಪ್ರೀತಿ, ಕಾಳಜಿಯಿಂದ ಕಾಣಬೇಕು. ಮಾತಿನಲ್ಲಿ ಕಟುತನವಿದ್ದರೂ, ಕಾಳಜಿ ಸದಾ ಇರಬೇಕು. ಅಂಥ ಯಜಮಾನನಿಗೆ ಸದಾ ಗೌರವ ಸಿಗುತ್ತದೆ. ಯಾರು ಮಗನಿಗೆ ಒಂದು ರೀತಿಯ ಪ್ರೀತಿ, ಮಗಳಿಗೆ ಇನ್ನೊಂದು ರೀತಿಯ ಪ್ರೀತಿ, ಪತ್ನಿಗೆ ಕಡಿಮೆ ಪ್ರೀತಿ, ಹೀಗೆ ಬೇಧ ಭಾವ ಮಾಡಿ, ಪ್ರೀತಿ- ಕಾಳಜಿ ಮಾಡುತ್ತಾರೋ, ಅಂಥ ಯಜಮಾನನ್ನು ಮನೆಜನ ಎಲ್ಲರೂ ಗೌರವದಿಂದ ಕಾಣುವುದಿಲ್ಲ.