LKG ಯಿಂದ PUC ವರೆಗೆ ಶಾಲಾ ಸಮಯ ಬದಲಾವಣೆ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ, ಶಾಲಾ–ಕಾಲೇಜುಗಳ ಸಮಯವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ.

ಚಳಿಗಾಲದ ತೀವ್ರತೆ ಕಡಿಮೆಯಾಗುವವರೆಗೆ LKG ಯಿಂದ PUC ವರೆಗೆ ಇರುವ ಎಲ್ಲಾ ತರಗತಿಗಳನ್ನು ಬೆಳಗ್ಗೆ 9.30ರಿಂದ ಆರಂಭಿಸುವಂತೆ ಆಯೋಗ ಸಲಹೆ ನೀಡಿದೆ. ಸದ್ಯ ರಾಜ್ಯದಲ್ಲಿ ಚಳಿ ಮತ್ತು ದಟ್ಟ ಮಂಜು ಕವಿದ ವಾತಾವರಣ ಮುಂದುವರಿದಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆಯೋಗ ಎಚ್ಚರಿಸಿದೆ.

ತೀವ್ರ ಚಳಿ ಹಾಗೂ ಮಂಜಿನ ಕಾರಣ ಮಕ್ಕಳಲ್ಲಿ ಶೀತ, ಜ್ವರ ಸೇರಿದಂತೆ ಉಸಿರಾಟ ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಭೀತಿ ಇದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತರಗತಿಗಳ ಸಮಯವನ್ನು ಬದಲಾಯಿಸುವ ಅಗತ್ಯವಿದೆ ಎಂದು ಆಯೋಗ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ತಾಪಮಾನ ತೀವ್ರವಾಗಿ ಕುಸಿತಗೊಂಡಿದೆ ಎಂದು ಗಮನಿಸಿದ ಆಯೋಗ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದೆ.

ಈ ಕುರಿತು ಶಿಕ್ಷಣ ಇಲಾಖೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ವಿದ್ಯಾರ್ಥಿಗಳು ಮತ್ತು ಪಾಲಕರ ಗಮನ ಸೆಳೆಯುತ್ತಿದೆ. ಚಳಿಗಾಲದ ತೀವ್ರತೆ ನಡುವೆ ಶಿಕ್ಷಣ ಇಲಾಖೆ ಶಾಲಾ ಸಮಯ ಬದಲಾವಣೆಗೆ ಒಪ್ಪಿಗೆಯನ್ನೇ ನೀಡುತ್ತದೆಯೇ? ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತರಗತಿಗಳ ಸಮಯ ಬದಲಾವಣೆ ಅಗತ್ಯ ಇದ್ಯಾ? ನೀವೇನಂತೀರಿ ಕಾಮೆಂಟ್ ಮಾಡಿ.

ವರದಿ : ಲಾವಣ್ಯ ಅನಿಗೋಳ

About The Author