ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ಬಿವೈ ವಿಜಯೇಂದ್ರ, ಅಧ್ಯಕ್ಷರಾಗಿ ತಮ್ಮ ಎರಡು ವರ್ಷವನ್ನು ಪೂರೈಸಿದ್ದಾರೆ. ಈ ಬೆನ್ನಲ್ಲೇ, ತಮ್ಮ ಕಾರ್ಯಶೈಲಿಯನ್ನು ಸಂಪೂರ್ಣ ಬದಲಾಯಿಸಿರುವುದು ಪಕ್ಷದೊಳಗೆ ಹೊಸ ರಾಜಕೀಯ ಸಮೀಕರಣಗಳ ಸೂಚನೆ ಆಗಿದೆ.
ಇದುವರೆಗೆ ಅವರ ವಿರುದ್ಧ ಅಸ್ತಿತ್ವದಲ್ಲಿದ್ದ ಭಿನ್ನಮತ ಗುಂಪಿನ ಒತ್ತಡವನ್ನು ಕಡಿಮೆ ಮಾಡಲು ಅವರು ಹಿರಿಯ ನಾಯಕರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ. ನವೆಂಬರ್ 10, 2023 ರಂದು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ, ಕಳೆದ ಎರಡು ವರ್ಷಗಳಲ್ಲಿ ಪಕ್ಷ ಸಂಘಟನೆಗೆ ಶ್ರಮ ಪಟ್ಟರೂ, ಒತ್ತಡ ಮತ್ತು ವಿರೋಧಿ ಬಣಗಳ ಮನಸ್ತಾಪಗಳಿಂದಾಗಿ ಸುಗಮವಾಗಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ ಎನ್ನುವುದು ಪಕ್ಷದೊಳಗಿನ ಆಪ್ತ ವಲಯದ ಅಭಿಪ್ರಾಯವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಾಮಾನ್ಯವಾಗಿ ರಾಜ್ಯ ಘಟಕದ ಶಿಫಾರಸುಗಳನ್ನು ತೆಗೆದುಕೊಳ್ಳದೆ ತಮ್ಮದೇ ವರದಿ ಆಧರಿಸಿ ನಿರ್ಧಾರ ನಡೆಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ರಾಜ್ಯ ಬಿಜೆಪಿ ಘಟಕದ ಯಾವುದೇ ಶಿಫಾರಸನ್ನು ಬಿಜೆಪಿಯ ವರಿಷ್ಠರು ಒಪ್ಪಿಕೊಂಡ ಉದಾಹರಣೆಗಳು ಕಮ್ಮಿ.ಈ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರ ಮುಂದಿನ ರಾಜಕೀಯ ಭವಿಷ್ಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಸದ್ಯ ರಾಜ್ಯ ಬಿಜೆಪಿ ಘಟಕದಲ್ಲಿ ಭಾರೀ ಸುದ್ದಿಯಲ್ಲಿರುವ ವಿಚಾರ ಏನಂದರೆ, ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯುತ್ತಾರೋ ಇಲ್ಲವೋ ಅನ್ನೋದು. ಇದಕ್ಕೆ ಕಾರಣ ವಿಜಯೇಂದ್ರ ಅವರ ವಿರೋಧಿ ಬಣದ ಪ್ರಕಾರ, ಯಡಿಯೂರಪ್ಪನವರ ಕುಟುಂಬದ ಸ್ವಯಂಕೃತ ಅಪರಾಧದಿಂದಾಗಿ ಭಿನ್ನಮತ ಭುಗಿಲೆದಿದ್ದು ಅನ್ನೋದು.
ಬಿಜೆಪಿಯಿಂದ ಅಮಾನತುಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪನವರ ಕುಟುಂಬವನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದು ಗೊತ್ತಿರುವ ವಿಚಾರ. ವಿಜಯೇಂದ್ರ ಅವರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ. ಪ್ರಮುಖ ವಿಚಾರಗಳನ್ನು ಚರ್ಚಿಸದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಿಲ್ಲ ಅನ್ನೋದು ಕೆಲ ಹಿರಿಯರ ಸಿಟ್ಟಿಗೆ ಕಾರಣವಾಗಿದೆ.
ಈಗ ವಿಜಯೇಂದ್ರ ವರ್ಕಿಂಗ್ ಸ್ಟೈಲೇ ಬದಲಾಗಿದೆ. ಪರಿಹಾರ ಕಂಡುಕೊಳ್ಳಲು ಆರಂಭಿಸಿದ್ದಾರೆ. ಮಠಾಧೀಶರು, ನಾಯಕರು, ಕಾರ್ಯಕರ್ತರ ಜೊತೆ ನಿರಂತರ ಸಂವಾದ ನಡೆಸಿದ್ದಾರೆ. ಈ ತಾಂತ್ರಿಕ ಬದಲಾವಣೆಗಳು ವಿಜಯೇಂದ್ರ ವಿರುದ್ಧದ ಅಸಮಾಧಾನವನ್ನು ಕಡಿಮೆ ಮಾಡುವ ಪ್ರಯತ್ನವೆಂದು ಪಕ್ಷದ ಮೂಲಗಳು ಹೇಳುತ್ತಿವೆ.
ಜೊತೆಗೆ, ದೆಹಲಿಯಿಂದ ಅವರಿಗೆ ಶುಭ ಸುದ್ದಿ ಬರುವ ಸೂಚನೆ ಸಿಕ್ಕಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ವಿಜಯೇಂದ್ರ ಅವರು ಪಕ್ಷದ ಪ್ರಮುಖ ಹಿರಿಯ ನಾಯಕರನ್ನು ಭೇಟಿ ಮಾಡುವುದರ ಮೂಲಕ ಸಂಬಂಧ ಸುಧಾರಿಸಿಕೊಳ್ಳುತ್ತಿರುವುದು ಪಕ್ಷದೊಳಗೆ ಪಾಸಿಟಿವ್ ಮೆಸೇಜ್ ರವಾನಿಸಿದೆ.
ವರದಿ : ಲಾವಣ್ಯ ಅನಿಗೋಳ




