Hubli News: ಹುಬ್ಬಳ್ಳಿ : ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ
ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮಿ.ಈಜುವ ಮೂಲಕ ಕರ್ನಾಟಕ ಖಾಕಿಗೆ ಕೀರ್ತಿ ತಂದಿದ್ದಾರೆ.
ಹೌದು, ಈ ಸಾಧನೆ ಮಾಡಿದವರು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ್ .ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬೆಂಗಾಲ ಮತ್ತು ಹರಿಯಾಣದ ಎರಡು ಜನ ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡ ವಿಶೇಷ ಈಜು ತಂಡವು ಹಿಂದೂಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಅಲ್ಲದೆ ಆಕಾಶದೆತ್ತರಕ್ಕೆ ಚಿಮ್ಮುವ ಅಲೆಗಳಲ್ಲಿಯೇ ಕೇವಲ 8 ಗಂಟೆ 30 ನಿಮಿಷದಲ್ಲಿ ನಿಗದಿತ ಗುರಿ ಮುಟ್ಟಿ ಅದ್ಭುತ ಸಾಧನೆ ಮಾಡಿದೆ.
ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರ ಜೊತೆ ಬೋಟಿನಲ್ಲಿ ಶ್ರೀಲಂಕಾಗೆ ಹೋಗಿದ್ದ ಐರನ್ ಮ್ಯಾನ್, ಅಲ್ಲದೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆ ಮಾಡಿರುವ ಚನ್ನಣ್ಣವರ್ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.
ಲಂಕಾ ಕಡಲಿನ ಈಜಿನ ಯಶಸ್ಸಿನಿಂದ. ಪ್ರೇರಿತರಾಗಿ ಮುಂಬರುವ ಜೂನ ತಿಂಗಳಲ್ಲಿ ವಿಶ್ವದ ಅತಿ ಕ್ಲಿಷ್ಟಕರವಾದ ಇಂಗ್ಲಿಷ ಕಾಲುವೆ(ಇಂಗ್ಲೆಂಡ ಮತ್ತು ಫ್ರಾನ್ಸ ಮದ್ಯದ 36 ಕಿಲೋಮೀಟರ ಕಾಲುವೆ) ಯನ್ನು ಈಜಲು ಅಮನ್ ಶಾನಭಾಗ ಜೊತೆ ಸಿದ್ದತೆ ಆರಂಭಿಸಿದ್ದಾರೆ.
“ಮನುಷ್ಯನಾದವನು ತಾನು ಮಾಡುವ ಕೆಲಸದಿಂದ ತನ್ನನ್ನು ಗುರುತಿಸಿಕೊಳ್ಳುವನು ನೋಡಾ, ಅವನು ಬೇಡವೆಂದರೂ ಅವನ ಕೆಲಸ ಅವನನ್ನು ಪರಿಚಯಿಸುತ್ತಿದೆ ಕಾಣಾ” ಎಂಬ ವಚನದಂತೆ ತಮ್ಮ ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಚನ್ನಣ್ಣವರ್ ಇಂತಹ ಸಾಹಸದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಾ ಕರ್ನಾಟಕ ಪೊಲೀಸ ಇಲಾಖೆಯ ಹಿರಿಮೆಯನ್ನೂ ಮೆರೆದಿದ್ದಾರೆ. ಮತ್ತಷ್ಟು ಯಶಸ್ಸು, ಕೀರ್ತಿ ಇವರನ್ನು ಅರಸಿ ಬರಲಿ ಎಂಬುದು ‘ಕನ್ನಡ ಧ್ವನಿ’ ಬಳಗದ ಶುಭ ಹಾರೈಕೆಯಾಗಿದೆ.