Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ತಮ್ಮ ಪುತ್ರಿ ನಂದಿತಾಳನ್ನು ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ನಾಲ್ಕು ತಿಂಗಳ ಹಿಂದೆ ಸೆನೆಗಲ್‌ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಸುಮಾರು ಹತ್ತು ದಿನಗಳ ಹಿಂದೆ ನಂದಿತಾಳನ್ನು 7 ಲಕ್ಷ ರೂಪಾಯಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿದ ಯುವತಿ, ತನ್ನನ್ನು ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ತಿಳಿಸಿ. ವಿಡಿಯೋ ಸಂದೇಶವನ್ನೂ ರವಾನಿಸಿದ್ದಾಳೆ ಎನ್ನಲಾಗಿದೆ.

ಈ ಮಾಹಿತಿ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ಬಂದ ಬಳಿಕ, ಸೆನೆಗಲ್ ಪೊಲೀಸರ ನೆರವಿನಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಬಳಿಕ ಪೋಷಕರು ಭಾರತಕ್ಕೆ ಮರಳಿರುವುದಾಗಿಯೂ ತಿಳಿದುಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದ್ದು, ಪೊಲೀಸ್ ತನಿಖೆಯ ಬಳಿಕವೇ ನಿಜಾಂಶ ಹೊರಬರಬೇಕಿದೆ.

About The Author