ಢಾಕಾ: ಶತ್ರು ದೇಶ ಪಾಕಿಸ್ತಾನದ ಜೊತೆ ಸೇರಿಕೊಂಡು ಭಾರತದ ವಿರುದ್ಧ ಸದಾ ಕಾಲ್ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಚೀನಾ ಇದೀಗ ಹೊಸ ಕುತಂತ್ರ ಮಾಡುತ್ತಿದೆ. ನಮ್ಮ ನೆರೆಯ ದೇಶ ಬಾಂಗ್ಲಾದಲ್ಲಿ ತನ್ನ ಪ್ರಭಾವವನ್ನ ಹೆಚ್ಚಿಸಿಕೊಳ್ಳೋಕೆ ಚೀನಾ ಪ್ರಯತ್ನಿಸುತ್ತಿದೆ. ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರ ಮತ್ತು ಅಲ್ಲಿನ ಪ್ರಭಾವಿ ಇಸ್ಲಾಮಿಕ್ ಪಕ್ಷಗಳೊಂದಿಗೆ ಸ್ನೇಹ ವೃದ್ಧಿಸಿಕೊಳ್ಳಲು ಚೀನಾ ಮುಂದಾಗಿದೆ. ಆತಂಕಕಾರಿ ಸಂಗತಿ ಎಂದರೆ ಬಾಂಗ್ಲಾವನ್ನ ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಬಯಸುತ್ತಿರುವ ಅಲ್ಲಿನ ಅತಿದೊಡ್ಡ ಇಸ್ಲಾಮಿಕ್ ಪಕ್ಷವಾಗಿರೋ ಜಮಾತ್-ಎ-ಇಸ್ಲಾಮಿಗೆ ಬೆಂಬಲ ಕೊಡಲು ಚೀನಾ ಮುಂದಾಗಿರೋದು ಸಹಜವಾಗೇ ಭಾರತಕ್ಕೆ ಆತಂಕ ಹೆಚ್ಚಿಸಿದೆ.
ಬಾಂಗ್ಲಾ ರಾಜಧಾನಿ ಢಾಕಾದ ಮೊಗ್ ಬಜಾರ್ನಲ್ಲಿರೋ ಜಮಾತ್-ಎ-ಇಸ್ಲಾಮಿ ಪಕ್ಷದ ಕಚೇರಿಗೆ ಚೀನಾದ ರಾಯಭಾರಿ ಯಾವೊ ವೆನ್ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಂದಹಾಗೆ ಜಮಾತ್-ಎ-ಇಸ್ಲಾಮಿ ಪಕ್ಷ ಭಾರತ ವಿರೋಧಿ ನಿಲುವು ಹೊಂದಿದ್ದು, ಇದೀಗ ಬಾಂಗ್ಲಾದಲ್ಲಿನ ರಾಜಕೀಯ ಅಸ್ಥಿರತೆಯನ್ನ ಬಂಡವಾಳ ಮಾಡಿಕೊಂಡಿರುವ ಚೀನಾ ಇದೀಗ ಇಸ್ಲಾಮಿಕ್ ಪಕ್ಷದ ಜೊತೆ ಕೈಜೋಡಿಸಿದೆ. ಈ ಮೊದಲು ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಜೊತೆಗೆ ಆಳವಾದ ಸಂಬಂಧವನ್ನ ಹೊಂದಿದ್ದ ಚೀನಾ, ಇದೀಗ ಅಲ್ಲಿನ ಮಧ್ಯಂತರ ಸರ್ಕಾರ ಮತ್ತು ಜಮಾತ್-ಎ-ಇಸ್ಲಾಮಿಯಂತಹ ರಾಜಕೀಯ ಪಕ್ಷಗಳೊಂದಿಗೆ ತನ್ನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಾಂಗ್ಲಾದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ಆ ದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ.
ಚೀನಾ ಹಾಗೂ ಬಾಂಗ್ಲಾ ನಡುವೆ ಏರ್ಪಡುತ್ತಿರುವ ಸ್ನೇಹ ಬಾಂಧವ್ಯ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಯಾಕೆಂದರೆ ಜಮಾತ್-ಎ-ಇಸ್ಲಾಮಿ ಪಕ್ಷದ ಜೊತೆ ಚೀನಾ ತನ್ನ ಸಂಬಂಧವನ್ನ ವೃದ್ಧಿಸಿಕೊಳ್ಳುವುದರಿಂದ ಬಾಂಗ್ಲಾದೊಂದಿಗೆ ಬಲವಾದ ಮತ್ತು ಸ್ಥಿರವಾದ ಸಂಬಂಧವನ್ನ ನಿರ್ಮಿಸುವ ಭಾರತದ ಪ್ರಯತ್ನಗಳನ್ನು ದುರ್ಬಲಗೊಳಿಸಬಹುದು. ಇದರ ಜೊತೆಗೆ ಚೀನಾ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ BRI ಅಂದ್ರೆ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ ಅಡಿಯಲ್ಲಿ ಬಾಂಗ್ಲಾದಲ್ಲಿ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಿದೆ. ಬಾಂಗ್ಲಾದ ಹೊಸ ಸರ್ಕಾರದ ಜೊತೆಗೆ ಚೀನಾ ತನ್ನ ಬಾಂಧವ್ಯವನ್ನ ಹೆಚ್ಚಿಸಿಕೊಳ್ಳುತ್ತಿರೋದ್ರಿಂದ ಆ ದೇಶದಲ್ಲಿ BRI ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಬಹುದು. ಇದರಿಂದ ಬಾಂಗ್ಲಾ ದೇಶದಲ್ಲಿ ಭಾರತದ ಪ್ರಭಾವ ಕಡಿಮೆ ಆಗಿ ಚೀನಾ ಪರವಾಗಿ ಪ್ರಾದೇಶಿಕ ಅಸಮತೋಲನವನ್ನು ಉಂಟು ಮಾಡುತ್ತದೆ.
ಬಾಂಗ್ಲಾದ ಅತಿದೊಡ್ಡ ಇಸ್ಲಾಮಿಕ್ ಪಕ್ಷವಾದ ಜಮಾತ್-ಎ-ಇಸ್ಲಾಮಿ ವಿರುದ್ಧ ಉಗ್ರಗಾಮಿ ಸಿದ್ಧಾಂತಗಳ ಜೊತೆಗೆ ಭಯೋತ್ಪಾದಕ ಚಟುವಟಿಕೆಗಳನ್ನ ಬೆಂಬಲಿಸುವ ಆರೋಪವೂ ಇದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜಮಾತ್-ಎ-ಇಸ್ಲಾಮಿ ಪಕ್ಷದ ಜೊತೆಗೆ ಚೀನಾ ಸ್ನೇಹಹಸ್ತ ಚಾಚಿರೋದು ಬಾಂಗ್ಲಾದಲ್ಲಿ ಮೂಲಭೂತವಾದ ಮತ್ತು ಅಸ್ಥಿರತೆಯನ್ನ ಬಲಪಡಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಸದ್ಯ ನೆರೆಯ ದೇಶ ಬಾಂಗ್ಲಾದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಸಹಜವಾಗಿಯೇ ಭಾರತಕ್ಕೆ ಆತಂಕ ಹೆಚ್ಚಿಸಿದೆ.