ಬೆಂಗಳೂರು: ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಸಲಿಂಗಕಾಮ ವಿಚಾರ ನಡೆದಿದೆ ಎಂದು ನ್ಯಾ.ಹೇಮಾ ಸಮಿತಿ ವರದಿ ಕೊಟ್ಟ ಬೆನ್ನಲ್ಲೇ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬರುತ್ತಿವೆ. ಕೇರಳದ ಸಿನಿರಂಗದ ಬಳಿಕ ಇದೀಗ ಸ್ಯಾಂಡಲ್ವುಡ್ನಲ್ಲೂ ಲೈಂಗಿಕ ಕಿರುಕುಳದ ಕೂಗು ಕೇಳಿ ಬಂದಿದೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ನಮ್ಮಲ್ಲೂ ಇದೇ ರೀತಿಯ ಸಮಿತಿಯನ್ನ ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ನಟ-ನಟಿಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. FIRE ಕಮಿಟಿ ಅಧ್ಯಕ್ಷರಾದ ನಿರ್ದೇಶಕಿ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟಿಯರಾದ ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ.ಜೆ.ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ಸಂಗೀತಾ ಭಟ್, ನೀತು ಶೆಟ್ಟಿ, ಮಾನ್ವಿತಾ, ಸಾನ್ವಿ ಶ್ರೀವಾಸ್ತವ್, ವಿನಯ್ ರಾಜ್‌ಕುಮಾರ್, ನಟ ಸುದೀಪ್, ಕಿಶೋರ್, ದಿಗಂತ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಕಿರುತೆರೆ ನಟ ನಟಿಯರು ಸೇರೊ ಒಟ್ಟು 153 ಮಂದಿ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಮೀ ಟೂ ಆರೋಪ ಕೇಳಿ ಬಂದಿದ್ದ ಸಂದರ್ಭದಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳಿಗಾಗಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚಿಸಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದಂತೆ ಹಲವರು ಇದ್ದಾರೆ. 2017ರಲ್ಲಿ ರಚನೆಯಾದ ಫೈರ್ ಕಮಿಟಿ ಇದೀಗ ಮತ್ತೆ ಲೈಂಗಿಕ ಕಿರುಕುಳದ ವಿರುದ್ಧ ಸೆಟೆದು ನಿಂತಿದೆ.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸರ್ಕಾರಕ್ಕೆ ಒತ್ತಾಯಿಸಿದೆ. ಜೊತೆಗೆ ಕನ್ನಡ ಸಿನಿರಂಗದಲ್ಲಿ ಮಹಿಳೆಯರು ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ.
2018ರಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಸಿನಿಮಾ ರಂಗದಲ್ಲೂ ಮೀ ಟೂ ಅಭಿಯಾನ ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟಿ ಶ್ರುತಿ ಹರಿಹರನ್ ಸೇರಿದಂತೆ ಹಲವು ನಟಿಯರು ಮಿ ಟೂ ಬಗ್ಗೆ ದನಿ ಎತ್ತಿದ್ದರು.