ಸಿಗರೇಟ್, ಗುಟ್ಟಾ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಇಂದಿನಿಂದಲೇ ಏರಿಕೆಯಾಗಲಿದೆ. ಕೇಂದ್ರ ಸರ್ಕಾರ ವಿಧಿಸಿರುವ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾ ಮೇಲಿನ ಆರೋಗ್ಯ ಸೆಸ್ ಭಾನುವಾರದಿಂದ ಜಾರಿಗೆ ಬಂದಿದೆ. ಈಗಾಗಲೇ ಜಾರಿಯಲ್ಲಿರುವ ಗರಿಷ್ಠ ಶೇ.40ರಷ್ಟು ಸರಕು ಮತ್ತು ಸೇವಾ ತೆರಿಗೆ ದರದ ಜೊತೆಗೆ ಹೊಸ ತೆರಿಗೆಗಳು ಅನ್ವಯವಾಗಲಿದ್ದು, 2017ರಲ್ಲಿ GST ಜಾರಿಯಾದ ಬಳಿಕ ಜಾರಿಯಲ್ಲಿದ್ದ ಶೇ.28 ತೆರಿಗೆ ಹಾಗೂ ಪರಿಹಾರ ಸೆಸ್ ವ್ಯವಸ್ಥೆಯನ್ನು ಇದೀಗ ಹೊಸ ಅಬಕಾರಿ ಸುಂಕಗಳು ಬದಲಿಸಿವೆ.
ಹೊಸ ನಿಯಮಗಳ ಪ್ರಕಾರ, ಅಗಿಯುವ ತಂಬಾಕು, ಫಿಲ್ಟರ್ ಖೈನಿ, ಜರ್ದಾ ಹಾಗೂ ಗುಟ್ಟಾಗಳಿಗೆ ಗರಿಷ್ಠ ಮಾರಾಟ ದರ ಆಧಾರಿತ ಮೌಲ್ಯಮಾಪನ ವಿಧಾನ ಜಾರಿಯಾಗಿದೆ. ಪಾನ್ ಮಸಾಲಾ ತಯಾರಕರು ಹೊಸ ಸೆಸ್ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಇದಕ್ಕೂ ಜೊತೆಗೆ ಉತ್ಪಾದನಾ ಘಟಕಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕನಿಷ್ಠ 24 ತಿಂಗಳವರೆಗೆ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕೆಂದು ಸರ್ಕಾರ ಸೂಚಿಸಿದೆ. ಸಿಗರೇಟ್ ಉದ್ದಕ್ಕೆ ಅನುಗುಣವಾಗಿ ಪ್ರತಿ ಸ್ಟಿಕ್ಗೆ 2 ರೂ. 05 ಪೈಸೆಯಿಂದ 8 ರೂ. 50 ಪೈಸೆಯವರೆಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿದೆ. ಸಣ್ಣ, ಫಿಲ್ಟರ್ ಇಲ್ಲದ ಸಿಗರೇಟ್ಗೆ ಕನಿಷ್ಠ 2.05 ರೂ. ತೆರಿಗೆ ಹೆಚ್ಚಳವಾಗಲಿದ್ದು, ಉದ್ದನೆಯ ಸಿಗರೇಟ್ಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ.
ಈ ತೆರಿಗೆ ಹೆಚ್ಚಳದ ಪರಿಣಾಮ ಮುಂದಿನ ಹಣಕಾಸು ವರ್ಷದಲ್ಲಿ ಸಿಗರೇಟ್ ಉದ್ಯಮ ಶೇ.6ರಿಂದ ಶೇ.8ರವರೆಗೆ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಪಾನ್ ಮಸಾಲಾ ಮೇಲಿನ ಒಟ್ಟು ತೆರಿಗೆ ಶೇ.88ರ ಮಟ್ಟದಲ್ಲೇ ಮುಂದುವರಿದಿದ್ದರೂ, ಸಂಗ್ರಹವಾಗುವ ಸೆಸ್ ಮೊತ್ತವನ್ನು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ರಾಷ್ಟ್ರೀಯ ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ




