ಗಾರ್ಡನ್ ಸಿಟಿ ಬೆಂಗಳೂರನ್ನು ಸ್ವಚ್ಛಗೊಳಿಸಲು ಸಿಟಿಕ್ಯಾಟ್ ಕಸ ಗುಡಿಸುವ ಯಂತ್ರಗಳು ಎಂಟ್ರಿ ಕೊಟ್ಟಿದೆ. ಬೆಂಗಳೂರನ್ನು ಕ್ಲೀನ್ ಮಾಡಲು ಹೊಸ ತಂತ್ರಜ್ಞಾನ ಹೊಂದಿರುವ ಸಿಟಿಕ್ಯಾಟ್ಗಳು ದುರ್ವಾಸನೆ ಮುಕ್ತ ಕಸ ವಿಲೇವಾರಿಯನ್ನು ಮಾಡಲಿದೆ. ಈಗಾಗಲೇ ಕೆಲವು ಯಂತ್ರಗಳು ಎಂಟ್ರಿ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿಟಿಕ್ಯಾಟ್ಗಳನ್ನು ಖರೀದಿ ಮಾಡಲಾಗುವುದು ಅಂತ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಈಗಾಗಲೇ 18.500ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರಿದ್ದಾರೆ. ಹಲವು ಎಲೆಕ್ಟ್ರಾನಿಕ್ ಕಸ ಗುಡಿಸುವ ಯಂತ್ರಗಳೂ ಕೆಲಸ ನಿರ್ವಹಿಸುತ್ತಿವೆ. ಆದರೆ ನಗರದ ಇನ್ನೂ ಹೆಚ್ಚಿನ ಸ್ವಚ್ಛತೆಗಾಗಿ ಸಿಟಿಕ್ಯಾಟ್ ಕಸ ಗುಡಿಸುವ ಯಂತ್ರ ಪರಿಚಯಿಸಲಾಗಿದೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ. ಬೆಂಗಳೂರನ್ನು ಸ್ವಚ್ಛವಾಗಿ ಮತ್ತು ಸ್ಮಾರ್ಟ್ ಆಗಿ ಮಾಡಲು ಸರ್ಕಾರವು ಶ್ರಮಿಸುತ್ತಿದೆ. ಹೊಸ ಸಿಟಿಕ್ಯಾಟ್ ವಾಹನವು ರಸ್ತೆಗಿಳಿಯಲು ಸಿದ್ಧವಾಗಿದೆ. ಇದು ಕೇವಲ ಯಂತ್ರವಲ್ಲ, ಸ್ವಚ್ಛ ಮತ್ತು ಹಸಿರು ಭವಿಷ್ಯದ ಸಂಕೇತ ಎಂದು ಶಿವಕುಮಾರ್ ಅವರು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಸ್ವಚ್ಛ ಬೆಂಗಳೂರು, ಸ್ಮಾರ್ಟ್ ಬೆಂಗಳೂರು. ಅತ್ಯಾಧುನಿಕ #CityCat ವಾಹನವು ಬೆಂಗಳೂರಿನ ಬೀದಿಗಳಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ. ಇದು ಕೇವಲ ಯಂತ್ರವಲ್ಲ – ಇದು ಸ್ವಚ್ಛ, ಹಸಿರು ಭವಿಷ್ಯದ ಬದ್ಧತೆಯ ಸಂಕೇತವಾಗಿದೆ. ನಾವು ನಮ್ಮ ನಗರವನ್ನು ಒಂದು ದಿಟ್ಟ ಹೆಜ್ಜೆಯೊಂದಿಗೆ ಪರಿವರ್ತಿಸುತ್ತಿದ್ದೇವೆ. ಬೆಂಗಳೂರು ಹೊಳೆಯುವವರೆಗೆ ನಾವು ನಿಲ್ಲುವುದಿಲ್ಲ, ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಏನಿದು ಸಿಟಿಕ್ಯಾಟ್ ವಾಹನ? ಇದರ ವಿಶೇಷತೆ ಮತ್ತು ಉಪಯೋಗಗಳೇನು ಅಂತ ನೋಡ್ತಾ ಹೋದರೆ..ಬೆಂಗಳೂರಿನಲ್ಲಿ 18,500 ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. 6000 ಟನ್ನಷ್ಟು ಘನ ತ್ಯಾಜ್ಯಗಳು ಪ್ರತಿದಿನ ರಾಜಧಾನಿಯಲ್ಲಿ ಸೃಷ್ಟಿಯಾಗುತ್ತಿದೆ. ಹೀಗಾಗಿ ಇದನ್ನು ಇನ್ನು ಸ್ವಚ್ಚಗೂಳಿಸಲು ಇದೀಗ ಸಿಟಿಕ್ಯಾಬ್ ವಾಹನವನ್ನು ಪರಿಚಯಸಲಾಗಿದೆ.
ಇದು ಸ್ವಿಟ್ಜರ್ ಲ್ಯಾಂಡ್ ಮೂಲದ ಪ್ರಖ್ಯಾತ ಬುಚೆರ್ ಸಂಸ್ಥೆಯು ತಯಾರಿಸಿರುವ ರಸ್ತೆ ಕಸ ಗುಡಿಸುವ ಯಂತ್ರ. ಅತ್ಯಾಧುನಿಕ ಸೌಲಭ್ಯವಿರುವ ಈ ವಾಹನವನ್ನು ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಬಿಬಿಎಂಪಿಯಿಂದ ಪರಿಚಯಿಸಲಾಗುತ್ತಿದೆ. ಬಿಬಿಎಂಪಿಯು ಜನದಟ್ಟನೆಯುಳ್ಳ ಪ್ರದೇಶದಲ್ಲಿ ಈ ವಾಹನವನ್ನು ಪರಿಚಯಿಸುತ್ತಿದೆ.
ಇನ್ನು ಇದರ ವಿಶೇಷತೆ: 360 ಡಿಗ್ರಿ ತಿರುಗುವ ಸೆಕ್ಷನ್ ಯಂತ್ರ, ಪರಿಸರ ಸ್ನೇಹಿ ತಂತ್ರಜ್ಞಾನ ಇದೆ. ನಿಯಂತ್ರಣ ಸಾಮರ್ಥ್ಯ, ಡಿಜಿಟಲ್ ನಿಯಂತ್ರಣ ಪ್ಯಾನೆಲ್, ಕಡಿಮೆ ಇಂಧನ ಬಳಕೆ, ಕಾರ್ಮಿಕರ ಮೇಲೆ ಇರುವ ಶ್ರಮದ ಒತ್ತಡವನ್ನು ಕಡಿಮೆ ಮಾಡಿ ಅವರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಿದೆ. ಗಂಟೆಗೆ 25 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತದೆ. ಈ ಸಿಟಿಕ್ಯಾಟ್ ವಿವಿಧ ಮಾದರಿಯ ಕಸಗಳನ್ನು ಸಮರ್ಥವಾಗಿ ಸಂಗ್ರಹಿಸುತ್ತದೆ ಮತ್ತು ಇನ್ನು ಹಲವಾರು ವೈಶಿಷ್ಟಗಳ ಜೊತೆ ಕೆಲಸ ಮಾಡುತ್ತದೆ.