ಒಂದು ಕಡೆ ಕಾಂಗ್ರೆಸ್ ಒಳ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಮತ್ತೊಂದು ಕಡೆ ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ನಡುವೆ ನಡೆಯುತ್ತಿರುವ “ಬ್ರೇಕ್‌ಫಾಸ್ಟ್ ರಾಜಕೀಯ” ಮತ್ತಷ್ಟು ಕುತೂಹಲ ಹುಟ್ಟಿಸಿದೆ. ನಾಳೆ ಬೆಳಗ್ಗೆ 9:30ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಉಪಹಾರ ಆತಿಥ್ಯ ಇದೆ.
ಹೈಕಮಾಂಡ್ ಸೂಚನೆಯ ನಂತರ ಸಿಎಂ–ಡಿಸಿಎಂ ನಡುವಿನ ಉಪಹಾರ ಸಭೆಗಳು ಮುಂದುವರಿದಿವೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಡಿಕೆಶಿಗೆ ಬ್ರೇಕ್‌ಫಾಸ್ಟ್ ಆಯೋಜಿಸಲಾಗಿತ್ತು. ಆಗ ಡಿಕೆಶಿ ಸಿದ್ದರಾಮಯ್ಯರನ್ನು ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಇದೇ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಈ ಭೇಟಿಗೆ ರಾಜಕೀಯ ಅರ್ಥಗಳ ಹುಡುಕಾಟ ಶುರುವಾಗಿದೆ.
ಸಿದ್ದರಾಮಯ್ಯರಿಗೆ ನಾಟಿ ಕೋಳಿ ಇಷ್ಟ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ, ಈ ಬಾರಿ ಉಪಹಾರಕ್ಕೆ ವಿಶೇಷ ಮೆನು ಸಿದ್ಧವಾಗಿದೆ. ಇಡ್ಲಿ, ನಾಟಿ ಕೋಳಿ ಸಾರು ಮತ್ತು ನಾಟಿ ಕೋಳಿ ಫ್ರೈ – ಇವುಗಳನ್ನು ಸಿಎಂಗೆ ಸ್ವತಃ ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿರುವ ಕನಕಪುರ ನಾಟಿ ಕೋಳಿಗಳಿಂದಲೇ ತಯಾರಿಸಲಾಗುತ್ತಿದೆ. ಬ್ರೇಕ್‌ಫಾಸ್ಟ್ ಸಭೆ ಕುರಿತು ಮಾತನಾಡಿದ ಡಿಕೆಶಿ, ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಗುಂಪು-ಗುಂಪು ಎನ್ನುವುದು ತಪ್ಪು. ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. 140 ಶಾಸಕರು ನಮ್ಮವರೇ, ನಾವು ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ. ಬ್ರೇಕ್‌ಫಾಸ್ಟ್ ಅಗತ್ಯವಿಲ್ಲ, ಮಾಧ್ಯಮ ಒತ್ತಡದಿಂದಲೇ ಇದೆಲ್ಲ ಎಂದು ಹೇಳಿದರು.
ನಾಳೆಯ ಸಭೆಯಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳ ಜೊತೆಗೆ, ಕೇಂದ್ರಕ್ಕೆ ಕೊಂಡೊಯ್ಯಲಾಗುವ ಸರ್ವಪಕ್ಷ ನಿಯೋಗದ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇಂದು ಪ್ರಾರಂಭವಾದ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ, ರಾಜ್ಯದ ಜಲ ಯೋಜನೆ, ಬೆಳೆಗಳ ಬೆಂಬಲ ಬೆಲೆ, ಖರೀದಿ ಕೇಂದ್ರಗಳು, ಅನುದಾನ ಸೇರಿದಂತೆ ಹಲವು ವಿಷಯಗಳನ್ನು ಸಂಸತ್ತಿನಲ್ಲಿ ಒತ್ತಿ ಹೇಳಲು ಯೋಜನೆ ಇದೆ.
ಈ ವಾರದಲ್ಲೇ ಸಿಎಂ–ಡಿಸಿಎಂ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಅಲ್ಲಿಗೆ ಹೋಗಿ ಎಲ್ಲಾ ಸಂಸದರನ್ನು ಭೇಟಿ ಮಾಡಿ, ಪ್ರಧಾನಿ ಮತ್ತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವ ಸರ್ವಪಕ್ಷ ಸಭೆ ನಡೆಯಲಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ, “ಡಬಲ್ ಬ್ರೇಕ್‌ಫಾಸ್ಟ್ ರಾಜಕೀಯ”, ಇಬ್ಬರ ಹೊಂದಾಣಿಕೆ ಮತ್ತು ಮುಂದಿನ ರಾಜಕೀಯ ತಂತ್ರದ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡುವ ನಿರೀಕ್ಷೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ
ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ ಅವರೇ ಮುಂದುವರೆಯುತ್ತಾರೆ – ಮಹದೇವಪ್ಪ
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಅವರೇ ಮುಂದುವರೆಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೇಳಿದ್ದಾರೆ.
ಕರ್ನಾಟಕದ ಕುರ್ಚಿ ಕಿತ್ತಾಟಕ್ಕೀಗ ಬ್ರೇಕ್ ಬಿದ್ದ ಬೆನ್ನಲ್ಲೇ, ಮಾಧ್ಯಮಗಳಿಗೆ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಬದಲಾವಣೆ ವಿಷಯ ಪಕ್ಷದ ಮುಂದೆಯೇ ಇಲ್ಲ. ಅಂತೆ ಕಂತೆ ಮಾತುಗಳು ಈಗ ಏಕೆ? ಯಾವುದೇ ಗೊಂದಲ ಇರಬಾರದು ಎಂದು, ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದು ಹೇಳಿದ್ರು.
ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೇ 5 ವರ್ಷ ಸರ್ಕಾರ ನಡೆಸುತ್ತೇವೆ. ಮತ್ತೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕ್ರಿಕೆಟ್ ಆಡುವ 11 ಮಂದಿ ಮಾತ್ರ ಬ್ಯಾಟ್ ಬೀಸಬೇಕು. ಉಳಿದವರು ಬ್ಯಾಟ್ ಬೀಸಿದರೆ ಏನು ಪ್ರಯೋಜನವಿಲ್ಲ. ಸ್ವಾಮೀಜಿಗಳು ಸೇರಿದಂತೆ ಯಾರೇ ಬ್ಯಾಟ್ ಬೀಸಿದರೂ, ಹೈಕಮಾಂಡ್ ನಿರ್ಧಾರವೇ ಅಂತಿಮ.
ನಮ್ಮ ಸರ್ಕಾರ ಸ್ಥಿರವಾಗಿದ್ದು ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್‌ನವರು ಶಾಸಕರ ಖರೀದಿ ಕೇಂದ್ರ ಮಾಡಿದ್ದಾರೆ ಎಂದು ಬಿಜೆಪಿಯವರು ಅರೋಪ ಮಾಡುತ್ತಾರೆ. ಅವರು ಹೇಗೆ ಅಧಿಕಾರಕ್ಕೆ ಬಂದರು ಎಂಬುದನ್ನು ಹೇಳಲಿ. ಅವರೇನು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದಾರಾ? ಎಂದು ಬಿಜೆಪಿಗರಿಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

