ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಕೆ.ಎನ್ ರಾಜಣ್ಣ ಅವರ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ, ರಾಜ್ಯ ಕಾಂಗ್ರೆಸ್ಸಲ್ಲಿ ಸುನಾಮಿಯನ್ನೇ ಸೃಷ್ಟಿಸಿತ್ತು. ಹಲವು ದಿನಗಳ ಬಳಿಕ ಹೈಕಮಾಂಡ್ ಎಂಟ್ರಿಯಿಂದಾಗಿ, ಬಹಿರಂಗ ಹೇಳಿಕೆಗಳಿಗೆಲ್ಲಾ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಸಿಎಂ ಬದಲಾವಣೆ ಕಿಚ್ಚು, ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಅದೇ ರಾಜಣ್ಣ.
ಮತ್ತೊಮ್ಮೆ ತಮ್ಮ ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ, ಕೆ.ಎನ್. ರಾಜಣ್ಣ ರೆಕ್ಕೆ ಕೊಟ್ಟಿದ್ದಾರೆ. ನಾನು ಹೇಳಿದ್ದು ನಿಜ ಅಂತಾ ಪರೋಕ್ಷವಾಗಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿ, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ಹೇಳಿಕೆಯಿಂದ ಹಿಂಜರಿಯುವುದಿಲ್ಲ ಎಂದಿದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಈಗಲೇ ಹೇಳಿದ್ರೆ, ಆಸಕ್ತಿ ಇರೋದಿಲ್ಲ. ನಾನು ಹೇಳಿದ್ದನ್ನು ಮಾಧ್ಯಮಗಳಲ್ಲಿ ತಪ್ಪು ಹೇಳಿದ್ದಾರೆ ಅಂತಾ, ಯಾವಾಗಲಾದ್ರೂ ಹೇಳಿದ್ದೀನಾ? ಬೇರೆ ರಾಜಕಾರಣಿಗಳು ಇಂಥಾ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ತಾರೆ. ಆದರೆ ನಾನು ಮಾಧ್ಯಮಗಳು ಕಂಡ ಕೂಡಲೇ ಎಲ್ಲವನ್ನೂ ಹೇಳಿಬಿಡುತ್ತೇನೆ ಎಂದ್ರು.
ನಾಯಕತ್ವ ಬದಲಾವಣೆ ವಿಚಾರದಲ್ಲಿ, ಮುಖ್ಯಮಂತ್ರಿಗಳು ಈಗಾಗಲೇ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಮತ್ತೆ ಅದರ ಬಗ್ಗೆ ಚರ್ಚೆಗಳು ಅನಗತ್ಯ. ಅವರೇ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರೋದಾಗಿ ಹೇಳಿದ್ದಾರೆ. ಏನೇ ತೀರ್ಮಾನ ಇದ್ದರೂ ಹೈಕಮಾಂಡ್ ಮಟ್ಟದಲ್ಲಿ ಆಗುತ್ತವೆ ಅಂತಾ ಹೇಳಿದ್ರು.
ದೆಹಲಿಗೆ ಸಿಎಂ-ಡಿಸಿಎಂ ಒಟ್ಟಾಗಿ ಹೋಗಿದ್ದಕ್ಕೂ, ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ಆಗುತ್ತಿರುವುದಕ್ಕೂ, ಕೆ.ಎನ್.ರಾಜಣ್ಣ ಹೇಳಿದ್ದಕ್ಕೂ ಸಿಂಕ್ ಆಗ್ತಿದೆ. ಸಿಎಂ ಬದಲಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಬದಲಾವಣೆ ಖಾತ್ರಿಯಾಗಿದೆ. ಆದರೆ ಅಧಿಕೃತವಾಗೋದಷ್ಟೇ ಬಾಕಿ ಇದೆ.