ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಭೇಟಿ ಮಾಡಿದ ಸಿಎಂ

Delhi News: ನವದೆಹಲಿ: “ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಹಾಗೂ ಮೇಕೆದಾಟು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಡಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ನವದೆಹಲಿಯ ಪರಿಸರ ಭವನದಲ್ಲಿ ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿ, ರಾಜ್ಯದ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ

“ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಪ್ರಸ್ತಾಪ ಕುರಿತು ಕೊನೆಯ ಬಾರಿಗೆ 28 ಫೆಬ್ರವರಿ 2026 ರಂದು ನಡೆದ SC-NBWL ನ 89ನೇ ಸಭೆಯಲ್ಲಿ ಚರ್ಚಿಸಲಾಯಿತು. ತಾಂತ್ರಿಕ ಸಮಿತಿಯು ಎತ್ತಿದ ಅಂಶಗಳಿಗೆ ಸ್ಪಷ್ಟೀಕರಣ ಹಾಗೂ NIAS ನಿಂದ ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ರಾಜ್ಯ/ಬಳಕೆದಾರ ಸಂಸ್ಥೆಗೆ ಸೂಚಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ (NIAS) ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಜೊತೆಗೆ, ಸ್ಥಾಯಿ ಸಮಿತಿಯು ಎತ್ತಿದ ಪ್ರಶ್ನೆಗಳಿಗೆ ಕರ್ನಾಟಕ ಸರ್ಕಾರವು ಸೂಕ್ತ ಉತ್ತರಗಳನ್ನು ನೀಡಿದೆ” ಎಂದು ವಿವರಿಸಿದರು.

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ

“ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭೂ-ತಾಂತ್ರಿಕ (geo-technical) ಸಮೀಕ್ಷೆಗಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಒಟ್ಟು 0.0000352 ಹೆಕ್ಟೇರ್ ಪ್ರದೇಶದಲ್ಲಿ 20 ಬೋರ್ ಹೋಲ್ ಗಳನ್ನು ಕೊರೆಯಲು ಅನುಮತಿ ಕೋರುವ ಈ ಪ್ರಸ್ತಾಪವನ್ನು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಸ್ಥಾಯಿ ಸಮಿತಿ ಪರಿಶೀಲನೆಗಾಗಿ 1 ಜುಲೈ 2026 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ಇತ್ತೀಚೆಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ವಿವಿಧ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEF&CC) ಅಗತ್ಯ ದಾಖಲೆ/ಮಾಹಿತಿಯನ್ನು (EDS) ಕೋರಿದ್ದು, ಅದನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಆದರೆ, ಈ ಪ್ರಸ್ತಾಪವು ಕೇವಲ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿದ್ದು, ಪ್ರಸ್ತುತ ಯಾವುದೇ ಸಂರಕ್ಷಿತ ಪ್ರದೇಶದ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲು (diversion) ಕೋರುತ್ತಿಲ್ಲ” ಎಂದು ವಿವರಿಸಿದ್ದಾರೆ.

“ಈ ನಿಟ್ಟಿನಲ್ಲಿ, NBWL ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಮೇಲ್ಕಂಡ ಎರಡು ಪ್ರಸ್ತಾಪಗಳನ್ನು ಶೀಘ್ರವಾಗಿ ಪರಿಶೀಲಿಸಿ ಶಿಫಾರಸು ಮಾಡಬೇಕು” ಎಂದು ಮನವಿ ಮಾಡಿದರು.

ಕಸ್ತೂರಿ ರಂಗನ್‌ ವರದಿ; ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಏಳನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬೇಡಿ

“ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ” ಕೇಂದ್ರ ಸಚಿವರಿಗೆ ವಿನಂತಿ ಮಾಡಿದರು.

“ಕಸ್ತೂರಿರಂಗನ್ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ಹೊರಡಿಸಿರುವ 27 ಜುಲೈ 2026 ರ 7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ ಕೋರಿ ದಿನಾಂಕ: 25-09-2026 ರ ಪತ್ರದ ಮೂಲಕ ಮಾನ್ಯ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೂ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ (HLC) ವರದಿ ಸಲ್ಲಿಕೆಯಾಗಿ, ಒಂದು ವರ್ಷದ ಅವಧಿಯಲ್ಲಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಇದನ್ನು ಅಂತಿಮಗೊಳಿಸಬಾರದು ಮತ್ತು ರಾಜ್ಯ ಸರ್ಕಾರದ ಸಮಾಲೋಚನೆಯೊಂದಿಗೆ ಭಾರತ ಸರ್ಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಕೋರಿದರು.

“ಬೆಳಗಾವಿಯ ಎಕೊ ಕೇನ್ ಶುಗರ್ ಅಂಡ್ ಎನರ್ಜಿ ಲಿ. ಸಕ್ಕರೆ ಕಾರ್ಖಾನೆಯು 2016 ಕ್ಕೂ ಮೊದಲು ಪ್ರಾರಂಭವಾಗಿರುವುದರಿಂದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವುದಿಲ್ಲ. ಈ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು 500 ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5000 ಕುಟುಂಬಗಳು ಈ ಕಾರ್ಖಾನೆಯನ್ನು ಅವಲಂಬಿಸಿವೆ. ಆದ್ದರಿಂದ ಈ ಸಕ್ಕರೆ ಕಾರ್ಖಾನೆಯನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕು” ಎಂದು ಮನವಿ ಮಾಡಿದರು.

About The Author