ಪ್ರಧಾನಿ ಜೊತೆ ಸಭೆಗೆ ಗೈರಾದ ಸಿಎಂ ಸಿದ್ದರಾಮಯ್ಯ: ಕಾಂಗ್ರೆಸ್ ಯೋಗ್ಯತೆ ಸಾಬೀತುಪಡಿಸಿದ್ದಾರೆಂದ ವಿಜಯೇಂದ್ರ

Political News: ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಸಿಎಂ ಜತೆ ಆನ್‌ಲೈನ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಯುದ್ಧದ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಸಭೆಗೆ ಗೈರಾಗಿದ್ದರು.

ಈ ಬಗ್ಗೆ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುದ್ಧದ ಸಂದರ್ಭದಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ವಿಡಿಯೋ ಸಂವಾದ ಏರ್ಪಡಿಸಿದ್ದು, ಸಂಕಷ್ಟದ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಮಹತ್ವದ ಸಂವಾದದಿಂದ ದೂರ ಉಳಿದು ಕರ್ನಾಟಕದ ಜನತೆಗೆ ದ್ರೋಹ ಬಗೆದಿದ್ದಾರೆ ಎನ್ನದೇ ವಿಧಿಯಿಲ್ಲ! ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಮಂಡಲದಲ್ಲಿ ಭಾಷಣ ಮಾಡುವ ವೇಳೆ ಹಾಗೂ ಮಾಧ್ಯಮಗಳ ಮುಂದೆ ಕೇಂದ್ರ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಟೀಕೆ ಮಾಡುವ ಮುಖ್ಯಮಂತ್ರಿಗಳು ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಪ್ರಧಾನಿಗಳ ಜತೆ ಸಂವಾದದಲ್ಲಿ ಭಾಗಿ ಆಗಬೇಕಿತ್ತು. ಯುದ್ಧದ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ತೊಂದರೆ ಆಗದಂತೆ ಯಾವ ರೀತಿ ಕ್ರಮ ಅನುಸರಿಸಬಹುದು ಎಂಬ ಸಲಹೆಗಳನ್ನೂ ನೀಡಬಹುದಿತ್ತು. ಅಲ್ಲದೇ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಪೂಕರವಾಗಿ ರಾಜ್ಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವಿಷಯದ ಕುರಿತು ಚರ್ಚೆ ಮಾಡಬಹುದಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.

ಆದರೆ ಉತ್ತರಕುಮಾರನ ಪೌರುಷ ತೋರುವ ಮುಖ್ಯಮಂತ್ರಿಗಳು ಪ್ರಧಾನಿಗಳ ಜತೆ ಮುಖಾಮುಖಿ ಆಗದೇ ಸಂವಾದದಿಂದ ದೂರ ಉಳಿದಿರುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಯೋಗ್ಯತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು ೭ ಕೋಟಿ ಕನ್ನಡಿಗರ ಪ್ರತಿನಿಧಿ ಎಂಬುದನ್ನು ಮರೆತು ಕೇವಲ ಕಾಂಗ್ರೆಸ್ ಕಚೇರಿ, ಸರಕಾರಿ ಬಂಗಲೆಗೆ ಸೀಮಿತ ಆಗಿರುವುದು ಕನ್ನಡಿಗರ ದುರಾದೃಷ್ಟ! ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

About The Author