ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಖ್ಯಾತಿ, ದಿನೇ ದಿನೇ ಹೆಚ್ಚಾಗ್ತಿದೆ. ಅದ್ರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರ ಪಾಲಿಗೆ, ಗೃಹಲಕ್ಷ್ಮೀ ಯೋಜನೆ ಸಂಜೀವಿನಿಯಾಗಿದೆ. ಯಜಮಾನಿಯರು ಪ್ರತಿ ತಿಂಗಳು ಬರುವ 2 ಸಾವಿರ ರೂ. ಹಣವನ್ನೇ ಕೂಡಿಟ್ಟು, ಗೃಹೋಪಯೋಗಿ ವಸ್ತುಗಳ ಖರೀದಿ ಮಾಡ್ತಿದ್ದಾರೆ.
ಆದ್ರೆ, ಇಲ್ಲೊಬ್ಬ ಮಹಿಳೆ, ತಮ್ಮ ಮನೆಗೆ 35 ಸಾವಿರ ರೂಪಾಯಿಯ, ಮರದ ಬಾಗಿಲನ್ನು ಮಾಡಿಸಿದ್ದಾರೆ. ವಿಶೇಷ ಅಂದ್ರೆ, ಸಿದ್ದರಾಮಯ್ಯ ಮೇಲಿನ ಅಭಿಮಾನದಿಂದ, ಅವರ ಚಿತ್ರವನ್ನೇ ಬಾಗಿಲ ಮೇಲೆ ಕೆತ್ತಿಸಿದ್ದಾರೆ.
ವಿಜಯನಗರ ಜಿಲ್ಲೆಯ ಗಡಿಗ್ರಾಮ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಮ್ಮ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಆಗಿದ್ದಾರೆ. ಯೋಜನೆ ಆರಂಭದಿಂದಲೂ ಈವರೆಗೆ, ಒಟ್ಟು 15 ತಿಂಗಳಿಂದ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗಿತ್ತು.
ಕಳೆದ 10 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆಯ ಬಾಗಿಲು ಸರಿ ಇರ್ಲಿಲ್ಲ. ಹೀಗಾಗಿ ಹೊಸ ಬಾಗಿಲು ಮಾಡಿಸಲು ಮುಂದಾಗಿದ್ರು. ಇದಕ್ಕೆ ಗೃಹಲಕ್ಷ್ಮೀ ಹಣ ಬಳಸಿಕೊಳ್ಳಲು ನಿರ್ಧರಿಸಿದ್ರು. ಜೊತೆಗೆ ಮಹಿಳೆಯರ ಬಗ್ಗೆ ಸಿದ್ದರಾಮಯ್ಯ ವಿಶೇಷ ಕಾಳಜಿ ಹೊಂದಿದ್ದಾರೆಂದು, ಅವರಿಗೆ ಕೃತಜ್ಞತೆ ಸಲ್ಲಿಸಲು ಸಖತ್ ಐಡಿಯಾ ಮಾಡಿದ್ರು.
ಹೊಸ ಬಾಗಿಲ ಮೇಲ್ಭಾಗದಲ್ಲಿ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೆಸರು ಕೆತ್ತಿಸಿದ್ದಾರೆ. ಬಾಗಿಲ ಮಧ್ಯಭಾಗದಲ್ಲಿ ಸಿದ್ದರಾಮಯ್ಯ ನಿಂತಿರುವ ಚಿತ್ರ, ಬಾಗಿಲ ಕೆಳಭಾಗದಲ್ಲಿ ಗೃಹಲಕ್ಷ್ಮೀ ಯೋಜನೆ ಎಂದು ಹೆಸರನ್ನು ಕೆತ್ತಿಸಿದ್ದಾರೆ. ಕುಶಲಕರ್ಮಿ ದುರ್ಗೇಶ್ ಕೆತ್ತನೆ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ, ಸಿದ್ದರಾಮಯ್ಯ ಚಿತ್ರವಿರುವ ಬಾಗಿಲು, ಸಖತ್ ವೈರಲ್ ಆಗಿದೆ.
ಸಿದ್ದರಾಮಯ್ಯ ಅಂದ್ರೆ ಪ್ರಾಣ. ಅವರು ಬಡವರ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ. ಅವರ ಫೋಟೋವನ್ನು ಬೆಳಗ್ಗೆ ಎದ್ದು ನೋಡಬೇಕೆಂದು ಆಸೆ. ಹೀಗಾಗಿ ಬಾಗಿಲ ಮೇಲೆ ಗೃಹಲಕ್ಷ್ಮೀ ಹಣದಲ್ಲೇ ಅವರ ಹೆಸರು, ಫೋಟೋ ಹಾಕಿಸಿದ್ದೇನೆ ಅಂತಾ, ಪಾರ್ವತಮ್ಮ-ತಿಪ್ಪೇಸ್ವಾಮಿ ದಂಪತಿ ಹೇಳಿದ್ದಾರೆ.




