ಬೆಂಗಳೂರು : ರಾಜ್ಯದಲ್ಲಿ ಮರು ಜಾತಿಗಣತಿ ನಡೆಸಲು, ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಗಣತಿ ನಡೆಸಲು ಸೂಚಿಸಲಾಗಿದೆ. ಅಕ್ಟೋಬರ್ ತಿಂಗಳು ಮುಗಿಯುವುದರೊಳಗೆ, ವರದಿ ಸಲ್ಲಿಸಲು ಸೂಚಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತು, ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದೆ. ಇದರಂತೆ ರಾಜ್ಯದ ಎಲ್ಲಾ 7 ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು, ಆಸ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಸಮೀಕ್ಷೆ, ಇಡೀ ದೇಶಕ್ಕೇ ಮಾದರಿಯ ಸಮೀಕ್ಷೆಯಾಗಬೇಕು. ಈ ಸಮೀಕ್ಷಾ ವರದಿ ಆಧಾರದಲ್ಲೇ ಮುಂದಿನ ಬಜೆಟ್ ಸಿದ್ಧವಾಗುತ್ತದೆ ಅಂದ್ರು. ಈ ಬಾರಿ ಸಮೀಕ್ಷೆ ಕುರಿತು ಯಾವುದೇ ದೂರುಗಳು ಬರದಂತೆ ಎಚ್ಚರವಹಿಸಿ. ಜೊತೆಗೆ ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಿ ಅಂತಾ ಸೂಚಿಸಿದ್ದಾರೆ.
ಈ ಹಿಂದೆ ಕಾಂತರಾಜು ಆಯೋಗ, 54 ಪ್ರಶ್ನೆಗಳನ್ನು ಸಿದ್ಧಪಡಿಸಿ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಮತ್ತಷ್ಟು ಅಂಶಗಳನ್ನು ಸೇರಿಸಲಾಗುತ್ತಿದೆ. ಜೊತೆಗೆ ಮೊಬೈಲ್ ಆಪ್ ಬಳಕೆಯನ್ನೂ ಮಾಡಲಾಗ್ತಿದೆ. ಸಮೀಕ್ಷೆಯ ಮೇಲುಸ್ತುವಾರಿಗೆ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಈ ಹಿಂದೆ ಕಾಂತರಾಜು ಆಯೋಗದ ಜಾತಿ ಸಮೀಕ್ಷಾ ವರದಿಗೆ, ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮತ್ತೆ ಜಾತಿ ಗಣತಿ ನಡೆಸಲು, ರಾಜ್ಯ ಸರ್ಕಾರ ಸೂಚಿಸಿದೆ. ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, 15 ದಿನದಲ್ಲಿ ಜಾತಿ ಗಣತಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ.