ಮೈಸೂರು : ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆಯೇ ನಿನ್ನೇ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಡಿಕೆಶಿ ಹೆಸರು ಹೇಳಲು ನಿರಾಕರಣೆ ಮಾಡಿದ್ದರು. ಮನೆಯಲ್ಲಿ ಕುಳಿತೋರಿಗೆಲ್ಲ ಸ್ವಾಗತ ಮಾಡಕಾಗಲ್ಲ ಎಂದು ಡಿಕೆಶಿ ಹೆಸರು ಪ್ರಸ್ತಾಪಿಸಿ ಅಂತ ಹೇಳಿದ್ದ ವೇದಿಕೆಯ ಮೇಲಿನ ಮುಖಂಡರ ವಿರುದ್ಧ ಗದರಿದ್ದರು.
ಈ ಸನ್ನಿವೇಶ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿತ್ತು. ಆದರೆ ಇದೀಗ ಇಬ್ಬರೂ ನಾಯಕರು ಒಂದೆಡೆ ಸೇರಿ ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ.
ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಈ ಕುರಿತು ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಎದುರಿನಲ್ಲೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಿನ್ನೆಯ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಇರಲಿಲ್ಲ, ಅದಕ್ಕೆ ನಾನು ಅವರ ಹೆಸರು ಕರೆಯಲಿಲ್ಲ. ಆದರೆ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವವರು. ಯಾವಾಗಲೂ ಸಮಾರಂಭಗಳಲ್ಲಿ ಯಾರು ಇರುತ್ತಾರೋ ಅವರಿಗಷ್ಟೇ ಸ್ವಾಗತ ಮಾಡಬೇಕು. ಯಾರು ಭಾಗಿಯಾಗಿರುತ್ತಾರೋ ಅವರ ಹೆಸರು ಹೇಳಬೇಕು. ಡಿಕೆ ಶಿವಕುಮಾರ್ ದಿಲ್ಲಿಗೆ ಹೋಗುತ್ತೇನೆ ಅಂತ ಹೇಳಿ ಹೋಗಿದ್ದರು. ಹೀಗಾಗಿ ಅವರ ಹೆಸರನ್ನು ಹೇಳಿಲ್ಲ. ನಾನು ಅವರಿಗೆ ಅವಮಾನ ಮಾಡಿಲ್ಲ ಎಂದು ತಿಳಿಸಿದ್ದಾರೆ. ನಮ್ಮಿಬ್ಬರ ನಡುವೆ ಒಡಕು ಮೂಡಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದರಿಂದ ತಮ್ಮ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿದ್ದಾರೆ, ಅದು ಭ್ರಮೆಯಾಗಿಯೇ ಉಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನನಗೆ ತುರ್ತು ಕಾರ್ಯದ ನಿಮಿತ್ತ ದೆಹಲಿಗೆ ಹೋಗಬೇಕಾಗಿದೆ ಅಂತ ಸಿದ್ದರಾಮಯ್ಯ ಅವರಿಗೆ ಹೇಳಿಯೇ ನನ್ನ ಭಾಷಣದ ಬಳಿಕ ಸಭೆಯಿಂದ ಎದ್ದು ಹೋಗಿದ್ದೆ. ನನ್ನ ಬೆಂಗಾವಲು ಪಡೆ ವಾಹನ ಅಪಘಾತಕ್ಕೀಡಾಗಿತ್ತು, ದೇವರು ದೊಡ್ಡವನು, ಚಾಮುಂಡೇಶ್ವರಿ ಕೃಪೆಯಿಂದ ಯಾರಿಗೂ ಏನು ಆಗಿಲ್ಲ. ತುಂಬಾ ಭೀಕರವಾಗಿ ವಾಹನ ಪಟ್ಟಿಯಾಗಿತ್ತು, ಆದರೂ ನಾನು 7.30ಕ್ಕೆ ದೆಹಲಿ ತಲುಪಿ, ಮತ್ತೆ 9 ಗಂಟೆಗೆ ವಾಪಸ್ಸಾಗಿದ್ದೇನೆ ಎಂದು ಹೇಳಿದ್ದಾರೆ. ಬಿಜೆಪಿಯವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ, ಮೋರ್ ಸ್ಟ್ರಾಂಗ್, ಮೋರ್ ಲವ್ ಎನ್ನುವ ಮೂಲಕ ಬಿಜೆಪಿ ನಾಯಕರ ಟೀಕೆಗಳಿಗೆ ಟಾಂಗ್ ನೀಡಿದ್ದಾರೆ.