ಚಿಕ್ಕಮಗಳೂರು: ಉದ್ಯಮಿ ಸಿದ್ಧಾರ್ಥ್ ಪಾರ್ಥಿವ ಶರೀರ ಚಿಕ್ಕಮಗಳೂರಿಗೆ ತಲುಪಿದ್ದು ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಚಿಕ್ಕಮಗಳೂರಿನ ಕೆಫೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಆವರಣದಲ್ಲಿ ಉದ್ಯಮಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸಿಎಂ ಯಡಿಯೂರಪ್ಪ ಹೂಗುಚ್ಚ ಅರ್ಪಿಸಿ ಅಂತಿಮ ನಮನ ಸಲ್ಲಿಸಿದ್ರು. ಅಲ್ಲದೆ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಬಳಿಕ ಮಾತನಾಡಿದ ಯಡಿಯೂರಪ್ಪ, ಸಿದ್ಧಾರ್ಥ್ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ. ಕಾಫಿ ಡೇ ಮೂಲಕ ಇಡೀ ವಿಶ್ವಕ್ಕೆ ಕಾಫಿ ಪರಿಚಯಿಸಿ, ಸಾಫ್ಟ್ ವೇರ್ ಮತ್ತಿತರ ಉದ್ಯಮದಲ್ಲೂ ಸೈ ಎನಿಸಿಕೊಂಡ ವ್ಯಕ್ತಿ, ಇಂತಹ ಅನಾಹುತ ಮಾಡಿಕೊಳ್ಳೋದನ್ನು ನಾವು ಯಾರೂ ಊಹಿಸಿರಲಿಲ್ಲ. ಕುಟುಂಬವರ್ಗದವರಿಗೆ ಯಾವ ರೀತಿ ಸಾಂತ್ವನ ಹೇಳಬೇಕೆಂಬುದು ತಿಳಿಯುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಸಿದ್ಧಾರ್ಥ್ ಏನೋ ತೀರ್ಮಾನ ತೆಗೆದುಕೊಂಡೇ ಈ ರೀತಿ ಮಾಡಿಕೊಂಡಿದ್ದಾರೆ. ಸದಾ ಎರಡು ಕಾರು ಸಿದ್ಧಾರ್ಥ್ ರನ್ನು ಹಿಂಬಾಲಿಸುತ್ತಿತ್ತು. ಆದ್ರೆ ಅಂದು ತೀರ್ಮಾನ ತೆಗೆದುಕೊಂಡೇ ಇಂಥಹಾ ಕೆಟ್ಟ ನಿರ್ಧಾರ ತೆಗೆದುಕೊಂಡಂತಿದೆ ಅಂತ ಬಿಎಸ್ವೈ ಹೇಳಿದ್ರು.
ಇನ್ನು ಸಿದ್ಧಾರ್ಥ್ ರ ಇಬ್ಬರು ಮಕ್ಕಳಿಗೆ ತಂದೆಯವರ ಉದ್ಯಮವನ್ನು ಬೆಳೆಸುವ ಶಕ್ತಿ ಇಧೆ. ನಾನು ನಿನ್ನೆ ಬೆಳಗ್ಗೆ ಎಸ್.ಎಂ ಕೃಷ್ಣಾ ಪುತ್ರಿಯ ಕಣ್ಣೀರು ನೋಡಲಾಗಲಿಲ್ಲ. ಭಗವಂತನ ಇಚ್ಛೆ ಏನಿತ್ತೋ ಅಂತ ವಿಷಾದ ವ್ಯಕ್ತಪಡಿಸಿದ ಬಿಎಸ್ವೈ ಸಿದ್ಧಾರ್ಥ್ ಕುಟಂಬಸ್ಥರಿಗೆ ನೋವು ಭರಿಸುವ ಶಕ್ತಿ ಕೊಡಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.