Tuesday, October 14, 2025

Latest Posts

ಕಲ್ಯಾಣ ಕರ್ನಾಟಕಕ್ಕೆ ಸಿಎಂ ಭರ್ಜರಿ ಗಿಫ್ಟ್!

- Advertisement -

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅನುದಾನ ಸಿಗಲಿದೆ. ಪ್ರತ್ಯೇಕ ಸಚಿವಾಲಯ, ಹಾಗೂ ವೈಶಿಷ್ಟ್ಯಪೂರ್ಣ ಯೋಜನೆಗಳು ದೊರೆಯಲಿದೆ. ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಕಲಬುರಗಿ DAR ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು ಎಂದು ಘೋಷಿಸಿದರು. ಇದಲ್ಲದೇ, ಈ ಭಾಗದ ನಿರ್ಜನತೆಯ ನೀರಾವರಿ ಸಮಸ್ಯೆ ಪರಿಹಾರಕ್ಕೆ ₹70,000 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾದರೂ, ಕೆಲ ಭಾಗಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದನ್ನು ಗಮನಿಸಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜಂಟಿ ಸಮಿತಿಗೆ ಆದೇಶ ನೀಡಲಾಗಿದೆಯೆಂದು ಸಿಎಂ ಹೇಳಿದರು.
ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನೂ ಗಮನದಲ್ಲಿಟ್ಟುಕೊಂಡು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ.

350 ಕೆಪಿಎಸ್ ಶಾಲೆಗಳ ನಿರ್ಮಾಣ, 204 ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯಗಳು, 2,515 ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಅಲ್ಲದೆ ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ವಿಶೇಷ ತರಬೇತಿ ಕೇಂದ್ರವನ್ನ ಮಾಡಲಾಗಿದೆ ಅಂತ ಹೇಳಿದ್ದಾರೆ.

ಕಲಬುರಗಿಯಲ್ಲಿ 100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಆಸ್ಪತ್ರೆ, 220 ಕೋಟಿ ರೂ ವೆಚ್ಚದಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಾಗಲಿದೆ. ವಿಶಿಷ್ಟ ಕ್ಯಾನ್ಸರ್ ಆಸ್ಪತ್ರೆಗೆ ನೆರವು, KKRDB ಹಾಟ್‌ಲೈನ್‌ಗೆ 9 ಕೋಟಿ ರೂ ವೆಚ್ಚದಲ್ಲಿ ಚಾಲನೆ. ಈ ಎಲ್ಲ ಯೋಜನೆಗಳೊಂದಿಗೆ ಕಲಬುರಗಿಯನ್ನು ಪ್ರಾದೇಶಿಕ ಹೆಲ್ತ್ ಹಬ್ ಆಗಿ ರೂಪಿಸುವ ಗುರಿಯೇ ಈಗ ಸರ್ಕಾರದ ಮುಂದಿರುವ ದಿಟ್ಟ ಹೆಜ್ಜೆ ಎಂದಿದ್ದಾರೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ಸಿಎಂ ಘೋಷಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಮೇಲೆ ವಿಶೇಷ ಗಮನ ಹರಿಸುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಬೃಹತ್ ಯೋಜನೆಗಳ ಮೂಲಕ ಈ ಭಾಗದ ಹಿನ್ನಡೆಯನ್ನು ದೂರ ಮಾಡುವ ಪ್ರಯತ್ನದಲ್ಲಿದೆ. ನೀರಾವರಿ, ಶಿಕ್ಷಣ, ಆರೋಗ್ಯ, ಮತ್ತು ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಕೊಟ್ಟಿರುವ ಈ ಭರ್ಜರಿ ಅನುದಾನಗಳು ಈ ಭಾಗದ ಜನತೆಯಲ್ಲಿ ಹೊಸ ಆಶಾಕಿರಣ ಮೂಡಿಸಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss