ಬಿಹಾರ ಚುನಾವಣಾ ಫಲಿತಾಂಶದ ರಾಜಕೀಯ ಪರಿಣಾಮಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಅಧಿಕಾರ ಗಟ್ಟಿಯಾಗುತ್ತಿದೆ’ ಎಂಬ ಸಂದೇಶದೊಡನೆ ನವೆಂಬರ್ 20ರಂದು ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಮಟ್ಟದ 72ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮಕ್ಕಾಗಿ ಜಿಲ್ಲಾಮಟ್ಟದಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಹಕಾರ ಇಲಾಖೆಯ ಆಶ್ರಯದಲ್ಲಿ ಹಾಗೂ ಜಿಲ್ಲೆಯ ಹಲವಾರು ಹಾಲು ಒಕ್ಕೂಟಗಳ ಸಹಯೋಗದಲ್ಲಿ ಸಮಾರೋಪ ಸಮಾರಂಭವನ್ನು ಈ ಬಾರಿ ಚಾಮರಾಜನಗರದಲ್ಲೇ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ನಗರದಲ್ಲೇ ನಡೆಸಬೇಕೆಂಬುದು ಸಿದ್ದರಾಮಯ್ಯ ಅವರ ಬಯಕೆ ಎಂದು ಮೂಲಗಳು ತಿಳಿಸಿವೆ.
ಚಾಮರಾಜನಗರಕ್ಕೆ ಬಂದಾಗಲೆಲ್ಲ ತಮ್ಮ ಅಧಿಕಾರ ಬಲವಾಗುತ್ತದೆ ಎಂಬ ಮಾತನ್ನು ಸಿದ್ದರಾಮಯ್ಯ ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದರು. ಈಗಲೂ ಅದೇ ರೀತಿಯ ರಾಜಕೀಯ ಸಂದೇಶ ಹೊರಬರುತ್ತಿರುವುದು ಗಮನ ಸೆಳೆದಿದೆ. ‘ನವೆಂಬರ್ ಕ್ರಾಂತಿ’ ಸಾಧ್ಯತೆಯ ಚರ್ಚೆಗಳ ಮಧ್ಯೆ, ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಬಂದ ಸೋಲಿನ ಬಳಿಕ, ರಾಜ್ಯದಲ್ಲಿ ಅಧಿಕಾರ ಬದಲಾವಣೆ ಸಾಧ್ಯತೆ ದುರ್ಬಲವಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತಷ್ಟು ಸ್ಥಿರಗೊಂಡಿದೆ ಎಂದು ವಿಶ್ಲೇಷಣೆಯಾಗಿದೆ.
ಸಿಎಂ ಭಾಗವಹಿಸುವ ರಾಜ್ಯ ಮಟ್ಟದ ಕಾರ್ಯಕ್ರಮವಿರುವುದರಿಂದ, ಚಾಮರಾಜನಗರದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದೆ.
ಸಮಾರಂಭದಲ್ಲಿ ಸಚಿವರು ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಲು ಒಕ್ಕೂಟಗಳ ಅಧ್ಯಕ್ಷರು, ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಾಗಲಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




