ರಾಜಣ್ಣ ರಾಜೀನಾಮೆ ವಿಚಾರ, ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ವಾಲ್ಮೀಕಿ ಹಗರಣದಲ್ಲಿ 14 ತಿಂಗಳ ಹಿಂದೆ, ನಾಗೇಂದ್ರ ಕೂಡ ರಾಜೀನಾಮೆ ಕೊಟ್ಟಿದ್ರು. ಇದೀಗ ರಾಜಣ್ಣ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಈ ಇಬ್ಬರು ನಾಯಕರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಒಂದೇ ಸಮುದಾಯದ ಇಬ್ಬರು ನಾಯಕರು ರಾಜೀನಾಮೆ ನೀಡಿದಂತಾಗಿದೆ. ಇಬ್ಬರೂ ಕೂಡ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇದು ಸಿದ್ದರಾಮಯ್ಯಗೆ ಡಬಲ್ ಶಾಕ್ ಸಿಕ್ಕಂತಾಗಿದೆ.
ಹೀಗಾಗಿ ಸಿದ್ದರಾಮಯ್ಯ ಟೆನ್ಶನ್ ಆಗಿದ್ದಾರೆ. ವಿಧಾನಸೌಧದ ಸಿಎಂ ಕಚೇರಿಯಲ್ಲೇ, ಸಿದ್ದರಾಮಯ್ಯ ಮ್ಯಾರಥಾನ್ ಮೀಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಗೃಹ ಸಚಿವ ಪರಮೇಶ್ವರ್, ಡಿಸಿಎಂ ಡಿಕೆಶಿ ಸೇರಿದಂತೆ, ಹಲವು ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡ್ತಿದ್ದಾರೆ. ಜೊತೆಗೆ ತುಮಕೂರಿನ ಪ್ರಮುಖ ನಾಯಕರು ಕೂಡ ಭಾಗಿಯಾಗಿದ್ದಾರೆ.
ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಶೀಘ್ರದಲ್ಲೇ ಮತ್ತಷ್ಟು ಸಚಿವರು ರಾಜೀನಾಮೆ ಕೊಡಲಿದ್ದಾರೆ ಅಂತಾ ಹೇಳಲಾಗ್ತಿದೆ. ರಾಜಣ್ಣ ರಾಜೀನಾಮೆ ಅವರ ಆಪ್ತ ಬಳಗಕ್ಕೂ ಭಾರೀ ಹೊಡೆತ ಕೊಟ್ಟಿದೆ. ಸಿಎಂಗೆ ರಾಜೀನಾಮೆ ಸಲ್ಲಿಸುವ ಮುನ್ನ, ಸತೀಶ್ ಜಾರಕಿಹೊಳಿ ಜೊತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
6 ಸಚಿವರನ್ನು ಕೈಬಿಡಬೇಕೆಂದು ರಾಹುಲ್ ಗಾಂಧಿ ಸ್ಪಷ್ಟ ಸಂದೇಶ ನೀಡಿದ್ರು. ಆದರೆ ಹಲವು ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಜಾತಿ ಸಮೀಕರಣ, ಪ್ರಾದೇಶಿಕ ವಿಚಾರ, ರಾಜಕೀಯ ಒತ್ತಡಗಳಿಂದಾಗಿ, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡಿರಲಿಲ್ಲ. ಆದ್ರೀಗ ರಾಜಣ್ಣ ರಾಜೀನಾಮೆಯಿಂದಾದ ಡ್ಯಾಮೇಜ್ ಕಂಟ್ರೋಲ್‌ಗೆ, ಹಲವು ಸಚಿವರಿಗೆ ಕೊಕ್ ಸಾಧ್ಯತೆ ಇದೆ.
ದಲಿತ ನಾಯಕನ ರಾಜೀನಾಮೆ ಅನ್ನೋ ಸಂದೇಶ ರವಾನೆಯಾಗದಿರುವಂತೆ, ಪ್ಲಾನ್ ಮಾಡಲಾಗ್ತಿದೆ. ಇದನ್ನು ಹೈಕಮಾಂಡ್ ಆದೇಶ ಅಥವಾ ಸಂಪುಟ ಪುನಾರಚನೆ ರೀತಿ ಬಿಂಬಿಸುವ ಯತ್ನ ನಡೀತಿದೆ. ಐದಾರು ಸಚಿವರನ್ನು ಕೈಬಿಡಬೇಕೆಂದು ಹೈಕಮಾಂಡ್ ಸೂಚಿಸಿದೆ. ಮುಂದಿನ ದಿನಗಳಲ್ಲಿ ಯಾರಿಗೆಲ್ಲಾ ಸಂಪುಟದಿಂದ ಕೊಕ್ ನೀಡಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.