ನೆನೆಗುದಿಗೆ ಬಿದ್ದ ಅನುಕಂಪ ಆಧಾರಿತ ನೌಕರಿ: ಬಾಕಿ ಉಳಿದ ಅವಲಂಬಿತರ 1300 ಅರ್ಜಿ..!

Hubli News: ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೇಮಕಾತಿ ವಿಷಯದಲ್ಲಿ ಸಾಕಷ್ಟು ಸುದ್ಧಿಯಾಗುತ್ತಲೇ ಇದೆ. 2814 ನೇಮಕಾತಿ ಪ್ರಕ್ರಿಯೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಾರಿಗೆ ಸಂಸ್ಥೆ, ಸರ್ಕಾರದ ನಿರ್ಧಾರದಿಂದ ಈಗ ನೌಕರರ ಕುಟುಂಬಸ್ಥರ ಅಲೆದಾಟ ಹೆಚ್ಚಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..

ಅನುಕಂಪದ ಹುದ್ದೆ ನೇಮಕ ನನೆಗುದಿಗೆ. NWKRTC ಯಲ್ಲಿ 1300 ಅರ್ಜಿ ಬಾಕಿ. ದಶಕದಿಂದ ಕುಟುಂಬಸ್ಥರ ಅಲೆದಾಟ. ಹೌದು.. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪ ಆಧಾರಿತ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಿ 10-20 ವರ್ಷ ಗತಿಸಿದರೂ ಮೃತರ ಅವಲಂಬಿತರಿಗೆ ಉದ್ಯೋಗ ಮಾತ್ರ ಸಿಕ್ಕಿಲ್ಲ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ 11 ವಿಭಾಗಗಳ ವ್ಯಾಪ್ತಿಯಲ್ಲಿ 1,300ಕ್ಕೂ ಅಧಿಕ ಮಂದಿ ಅನುಕಂಪದ ಆಧಾರದಲ್ಲಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಸಿದ ಅರ್ಜಿಗಳ ವಿಲೇವಾರಿ 2002ರಿಂದ ಬಾಕಿ ಉಳಿದಿದ್ದು, ಕುಟುಂಬಸ್ಥರ ಅಲೆದಾಟಕ್ಕೆ ಮಾತ್ರ ಬೆಲೆಯೇ ಇಲ್ಲದಂತಾಗಿದೆ. ರೋಸ್ಟರ್ ನಿಯಮಾನುಸಾರ ಇರಬೇಕಾದ ವಯಸ್ಸು ಮೀರಿದ ಕಾರಣದಿಂದ ಕೆಲವರು ಉದ್ಯೋಗದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಹೇಳುವುದು ಹೀಗೆ.

ಇನ್ನೂ ಅರ್ಜಿದಾರರು ಕಿರಿಯ ಸಹಾಯಕ, ಕಚೇರಿ ಸಹಾಯಕ, ತಾಂತ್ರಿಕ ಸಹಾಯಕ, ಶುಚಿಗಾರ ಸೇರಿದಂತೆ ತಮ್ಮ ವಿದ್ಯಾರ್ಹತೆಗೆ ಸೂಚಿತವಾದ ಹುದ್ದೆಗಳನ್ನು ಉಲ್ಲೇಖಿಸಿದ್ದರೂ ಉದ್ಯೋಗ ನೀಡಿಲ್ಲ. ಧಾರವಾಡ ವಿಭಾಗ 96, ಬಾಗಲಕೋಟೆ 158, ಬೆಳಗಾವಿ 138, ಚಿಕ್ಕೋಡಿ 154, ಹುಬ್ಬಳ್ಳಿ 95, ಹುಬ್ಬಳ್ಳಿ ನಗರ 57, ಹಾವೇರಿ 94, ಉತ್ತರ ಕನ್ನಡ 73, ಗದಗ 133, ಹುಬ್ಬಳ್ಳಿ ಕೇಂದ್ರ ಕಚೇರಿ 3 ಹಾಗೂ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಗೆ 17 ಜನ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ಹತ್ತು ಹನ್ನೆರಡು ವರ್ಷಗಳೇ ಕಳೆದರೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ಕುಟುಂಬಸ್ಥರ ಕನಸು ಕನಸಾಗಿಯೇ ಉಳಿದಿದೆ. ಈಗಾಗಲೇ ವಿದ್ಯಾರ್ಹತೆ ಅನುಗುಣವಾಗಿ ಡ್ರೈವರ್ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ನೌಕರಿ ಕೊಟ್ಟಿದ್ದೇವೆ. ಸಂಸ್ಥೆಗೆ ಹೆಚ್ಚಿನ ಅವಶ್ಯಕತೆ ಇರುವುದು ಚಾಲಕ ನಿರ್ವಾಹಕರ ಪೋಸ್ಟ್ ಹೀಗಾಗಿ ಅನುಕಂಪದ ಇತರೆ ಹುದ್ದೆಗಳಿಗೆ ವಿಳಂಬವಾಗಿದೆ ಅಂತಾರೇ ಅಧಿಕಾರಿಗಳು.

ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಪಡೆಯುವುದು ಸಾಹಸದ ಕೆಲಸವೇ ಆಗಿದೆ. ನೌಕರರು ಮೃತಪಟ್ಟು, ಸುಮಾರು ವರ್ಷಗಳೇ ಕಳೆದರೂ ಕುಟುಂಬಸ್ಥರಿಗೆ, ಅವಲಂಬಿತರಿಗೆ ಮಾತ್ರ ನೌಕರಿ ಸಿಗದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆ, ಸಾರಿಗೆ ಸಚಿವರು ಸೂಕ್ತ ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author