www.karnatakatv.net: ಉತ್ತಮ ಗುಣಮಟ್ಟದ ಕೊರೊನಾ ಲಸಿಕೆಗಳನ್ನು ತಯಾರಿಸುತ್ತಿರುವ ಭಾರತೀಯ ಉದ್ಯಮದಲ್ಲಿ ನಮಗೆ ವಿಶ್ವಾಸವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
‘ಕೋವಾಕ್ಸಿನ್ ತಯಾರಕ ಸಂಸ್ಥೆಯಾದ ‘ಭಾರತ್ ಬಯೋಟೆಕ್’ ಡಬ್ಲ್ಯುಎಚ್‌ಒಗೆ ನಿಯಮಿತವಾಗಿ ಮತ್ತು ತ್ವರಿತವಾಗಿ ಮಾಹಿತಿಗಳನ್ನು ಸಲ್ಲಿಸುತ್ತಿದೆ. ಉತ್ತಮ ಗುಣಮಟ್ಟದ ಕೋವಿಡ್ ಲಸಿಕೆಗಳನ್ನು ತಯಾರಿಸುತ್ತಿರುವ ಭಾರತೀಯ ಉದ್ಯಮದಲ್ಲಿ ನಮಗೆ ವಿಶ್ವಾಸವಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡಲು ಹೈದರಾಬಾದ್ ಮೂಲದ ‘ಭಾರತ್ ಬಯೊಟೆಕ್’ ಸಂಸ್ಥೆಯು ಡಬ್ಲ್ಯೂಎಚ್‌ಒ ದತ್ತಾಂಶಗಳನ್ನು ಒದಗಿಸಿತ್ತು.
‘ತಾಂತ್ರಿಕ ಸಲಹಾ ಸಮಿತಿ ಉತ್ಪಾದಕ ಸಂಸ್ಥೆಯಿoದ ಹೆಚ್ಚುವರಿ ಸ್ಪಷ್ಟನೆ ಪಡೆಯಲು ನಿರ್ಧರಿಸಿದೆ. ವಾರಾಂತ್ಯದ ವೇಳೆಗೆ ವಿವರ ಸಿಗಬಹುದು. ನ.3ರಂದು ಮತ್ತೆ ಸಮಿತಿ ಸಭೆ ಸೇರಲಿದೆ’ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ. ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡುವ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಚ್‌ಒದ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ವಿಭಾಗದ ಸಹಾಯಕ ಮಹಾನಿರ್ದೇಶಕಿ ಡಾ. ಮರಿಯಾಂಜಿಲಾ ಸಿಮಾವೊ ಕೋವಾಕ್ಸಿನ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ನಾವು ನಿಜವಾಗಿಯೂ ಭಾರತೀಯ ಉದ್ಯಮವನ್ನು ನಂಬುತ್ತೇವೆ. ಭಾರತವು ವಿವಿಧ ಲಸಿಕೆಗಳನ್ನು ಉತ್ಪಾದಿಸುತ್ತದೆ. ಅವುಗಳು ಉತ್ತಮ ಗುಣಮಟ್ಟದ ಲಸಿಕೆಗಳಾಗಿವೆ. ನಾವೀಗ ಭಾರತದ ಕೋವಿಡ್ ಲಸಿಕೆಯ ಮೌಲ್ಯಮಾಪನದ ಕೊನೆಯ ಹಂತದಲ್ಲಿದ್ದೇವೆ. ಮುಂದಿನ ವಾರ ಅನುಮತಿ ಸಿಗಬಹುದು’ ಎಂದು ಸಿಮಾವೊ ತಿಳಿಸಿದ್ದಾರೆ.