ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ದೋಸ್ತಿ ಸದಸ್ಯರೂ ಸಮರ ಸಾರಿದ್ದಾರೆ. ನಮಗೆ ಮೋಸ ಮಾಡಿ ಮುಂಬೈ ಸೇರಿರುವ ಅವರಿಗೆ ನೀವು ನಿಮ್ಮ ಪಕ್ಷದಲ್ಲಿ ಯಾವುದೇ ಸ್ಥಾನ ನೀಡಬೇಡಿ, ನಾವೂ ನೀಡಲ್ಲ ಅಂತ ಸದನದಲ್ಲಿ ಮನವಿ ಮಾಡಿದ್ದಾರೆ.
ರಾಜೀನಾಮೆ ನೀಡಿ ಸರ್ಕಾರವನ್ನು ಪತನದಂಚಿಗೆ ತಂದಿರುವ ಅತೃಪ್ತ ಶಾಸಕರ ಕುರಿತಾಗಿ ಇಂದು ಸದನದಲ್ಲಿ ಚರ್ಚೆ ನಡೆದಿದೆ. ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್ ರಾಜೀನಾಮೆ ನೀಡಿ ಮುಂಬೈ ಸೇರಿದ್ದಾರೆ. ಅಂತಹವರಿಗೆ ನೀವು ಮಾನ್ಯತೆ ಕೊಡಬೇಕಾ. ಹಾಗೆ ಮಾಡಿದರೆ ಜನ ನಿಮ್ಮನ್ನು ನಂಬುತ್ತಾರಾ ಅಂತ ಪ್ರಶ್ನಿಸಿದ ಖಾದರ್ ಯಾವುದೇ ಕಾರಣಕ್ಕೂ ಅವರಿಗೆ ಮಂತ್ರಿಗಿರಿ ನೀಡಲೇಬಾರದು ಅಂತ ಮನವಿ ಮಾಡಿದ್ರು.
ಬಳಿಕ ಮಧ್ಯ ಪ್ರವೇಶಿಸಿ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ರಾಜೀನೀಮೆ ನೀಡಿದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ, ಅವರಿಗೆ ಮಂತ್ರಿಗಿರಿ ನೀಡಲ್ಲ ಅಂತ ಹೇಳಿಬಿಡಲಿ. ಯಾವುದೇ ಚರ್ಚೆಗೆ ಹೋಗದೆ ನೇರವಾಗಿ ಸಿಎಂರನ್ನು ಕರೆಸಿ ನಾವು ಮತಕ್ಕೆ ಹಾಕುತ್ತೇವೆ. ಸದನದಲ್ಲಿ ಈ ಒಂದು ವಿಷಯ ತೀರ್ಮಾನವಾಗಲಿ, ಈ ಬಗ್ಗೆ ಸ್ಪಷ್ಟನೆ ನೀಡಿದ್ರೆ ಮತಕ್ಕೆ ಹಾಕುತ್ತೇವೆ ಅಂತ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಹೇಳಿದ್ರು. ಆ ನಂತರ ನೀವು ಏನು ಉದ್ದಾರ ಮಾಡ್ತೀರೋ ಮಾಡಿ. ನೀವು ಮಾಡುತ್ತಿರೋದು ಎಲ್ಲರಿಗೂ ಗೊತ್ತಿದೆ, ನಿಮಗೂ ಅವರಿಗೂ ಯಾವ ಸಂಬಂಧವೂ ಇಲ್ಲ ಅನ್ನೋದನ್ನು ಹೇಳಿಬಿಡಿ ಈ ಗುಟ್ಟನ್ನು ಯಾಕೆ ಮುಚ್ಚಿಡುತ್ತಿದ್ದೀರಿ ಅಂತ ಶಿವಲಿಂಗೇಗೌಡ ಬಿಜೆಪಿಗೆ ಖಾರವಾಗಿ ಪ್ರಶ್ನಿಸಿದ್ರು.