ಉತ್ತರ ಕನ್ನಡ: ರಾಜ್ಯಬಿಟ್ಟು ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕಾರಣವಾಗಿರೋ ಅತೃಪ್ತರು ತಾವು ಯಾವುದಕ್ಕೂ ಬಗ್ಗೋದಿಲ್ಲ ಅನ್ನೋ ಸಂದೇಶವನ್ನು ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ರವಾನಿಸಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದು, ನಮಗೆ ಅನರ್ಹತೆ ಭೀತಿ ಇಲ್ಲ, ಯುದ್ಧಕ್ಕೆ ಇಳಿದಿದ್ದಾಗಿದೆ ಎಲ್ಲವನ್ನೂ ಎದುರಿಸುತ್ತೇವೆ ಅಂತ ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ವೈಯಕ್ತಿಕ ಕೆಲಸದ ನಿಮಿತ್ತ ಪುಣೆಯಿಂದ ತಮ್ಮ ಕ್ಷೇತ್ರಕ್ಕೆ ಬಂದಿದ್ದ ಕಾಂಗ್ರೆಸ್ ನ ಯಲ್ಲಾಪುರ ಕ್ಷೇತ್ರದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವೆಲ್ಲಾ ಅತೃಪ್ತರು ಒಗ್ಗಟ್ಟಾಗಿದ್ದೇವೆ. ಇನ್ನು ಎದುರಾಗಿರುವ ಸಮಸ್ಯೆ ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ ಅಂತ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ರಾಜೀನಾಮೆ ಅಂಗೀಕಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಹೆಬ್ಬಾರ್, ಸ್ಪೀಕರ್ ಮತ್ತು ಸುಪ್ರೀಂಕೋರ್ಟ್ ಮೇಲೆ ಅಪಾರವಾದ ನಂಬಿಕೆ ಇದೆ. ರಾಜೀನಾಮೆ ಅಂಗೀಕಾರವಾದ ಬಳಿಕ ನಮ್ಮ ನಿಲುವು ತಿಳಿಸುತ್ತೇವೆ. ಇನ್ನು ರಾಜೀನಾಮೆ ಅಂಗೀಕಾರ ವಿಳಂಬ ವಿಚಾರವಾಗಿ ಮಾತನಾಡಿದ ಹೆಬ್ಬಾರ್, ಈ ಹಿಂದೆ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಅಂಗೀಕಾರವಾಗಿತ್ತು. ಆದ್ರೆ ನಮ್ಮ ರಾಜೀನಾಮೆ ಕುರಿತು ವಿಳಂಬವಾಗುತ್ತಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.
ಬಳಿಕ ಮಾತನಾಡಿದ ಶಾಸಕ ಹೆಬ್ಬಾರ್, ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸದ ಕಾರಣ ರಾಜೀನಾಮೆ ನೀಡಲಾಗಿದೆ. ನಮಗೆ ಸಮ್ಮಿಶ್ರ ಸರ್ಕಾರದ ಮೇಲೆ ಮಾತ್ರ ಅಸಮಾಧಾನವಿತ್ತು. ಸಿದ್ದರಾಮಯ್ಯನವರು ನಮ್ಮ ನಾಯಕರಾಗಿದ್ದರು, ಆದರೆ ಈಗ ಅವರು ನಮ್ಮ ನಾಯಕರಲ್ಲ ಅಂತ ಹೇಳಿದ್ದಾರೆ ಈ ಬಗ್ಗೆ ನಮಗೇನೂ ಆಕ್ಷೇಪವಿಲ್ಲ. ಅನರ್ಹತೆಗೊಳಿಸುವ ಬಗ್ಗೆ ನಮಗೆ ಯಾವುದೇ ರೀತಿ ಭಯವಿಲ್ಲ, ಯುದ್ಧಕ್ಕೆ ಇಳಿದಾದ ಮೇಲೆ ಎಲ್ಲವನ್ನೂ ಎದುರಿಸುತ್ತೇವೆ ಅಂತ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.