ಬಿಹಾರ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ 6 ತಿಂಗಳ ಹಸುಗೂಸು ಪ್ರಾಣ ಬಿಟ್ಟಿರುವ ಘಟನೆ ವರದಿಯಾಗಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದ್ದು ಇನ್ನೂ ಬಾಳಿ ಬದುಕಬೇಕಿದ್ದ ಕಂದಮ್ಮ ಇಹಲೋಕ ತ್ಯಜಿಸಿದೆ.
ಬಿಹಾರದ ಪಾಟ್ನಾ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಮನಕಲುಕುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ತನ್ನ ಪೋಷಕರೊಂದಿಗೆ ದೆಹಲಿಗೆ ತೆರಳುತ್ತಿದ್ದ 6 ತಿಂಗಳ ಕಂದಮ್ಮ ವಿಮಾನದಲ್ಲೇ ಮೃತಪಟ್ಟಿದೆ. ಇನ್ನು ಶಿಶುವಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಅದಕ್ಕೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಬಿಹಾರ ಮೂಲದ ದಂಪತಿ ಮಗುವನ್ನು ದೆಹಲಿಗೆ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಚಿಕಿತ್ಸೆ ಪಡೆಯುವುದಕ್ಕೂ ಮುನ್ನವೇ ಇನ್ನೂ ಕಣ್ಣು ಬಿಟ್ಟು ಪ್ರಪಂಚವನ್ನೇ ಕಾಣದ ಶಿಶು ಇಹಲೋಕ ತ್ಯಜಿಸಿದೆ.
ಇನ್ನು ಕಳೆದ ಶುಕ್ರವಾರದಂದು ಸ್ಪೈಸ್ ಜೆಟ್ ವಿಮಾನದಲ್ಲೇ ಥಾಯ್ಲೆಂಡ್ ಪ್ರಯಾಣಿಕನೊಬ್ಬನಿಗೆ ಹೃದಯಾಘಾತವಾದ ಘಟನೆಯೂ ನಡೆದಿತ್ತು. ದೆಹಲಿಯತ್ತ ಸಾಗುತ್ತಿದ್ದ ವಿಮಾನ ಕೂಡಲೇ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿ ಪ್ರಯಾಣಿಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು.