ಬೆಂಗಳೂರು: ಕಾಂಗ್ರೆಸ್ ಪಕ್ಷವು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಪ್ರಸ್ತುತ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂದು ಕಪೋಲಕಲ್ಪಿತವಾಗಿ ವದಂತಿ ಹಬ್ಬಿಸುವಲ್ಲಿ ನಿರತವಾಗಿರುವುದು ಆ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಎಂಬುದಾಗಿ ಸಚಿವ ಸಿಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮುಖ್ಯಮಂತ್ರಿಗಳನ್ನು ಪದೇಪದೇ ತಮ್ಮಿಷ್ಟಕ್ಕೆ ಬದಲಾಯಿಸುವ ಚಾಳಿ ಇರುವುದು ಕಾಂಗ್ರೆಸ್ಸಿನ ಹೈಕಮಾಂಡಿನಲ್ಲಿ ಎಂಬುದನ್ನು ಕಾಂಗ್ರೆಸ್ಸಿಗರು ಮೊದಲು ನೆನಪು ಮಾಡಿಕೊಳ್ಳಲಿ ಎಂದಿದ್ದಾರೆ.
ಜನಪರ ಆಡಳಿತ ನೀಡುತ್ತಾ ಒಂದು ವರ್ಷದ ಆಡಳಿತವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನೀಡಿರುವುದಲ್ಲದೆ, ಮುಂದೆಯೂ ಸುಭದ್ರ ಸರ್ಕಾರವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಕಾಂಗ್ರೆಸ್ಸಿಗರಿಗೆ ಹಗಲುಗನಸು ಬೇಡ ಎಂದು ಹೇಳಿದ್ದಾರೆ.
ಸನ್ಮಾನ್ಯ ಬೊಮ್ಮಾಯಿಯವರು ರಾಜ್ಯವನ್ನು ಸಮರ್ಥವಾಗಿ ಅಭಿವೃದ್ಧಿಪಥದಲ್ಲಿ ಮುನ್ನಡೆಸುತ್ತಿರುವದರಿಂದ ಈಗ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ 2023 ರ ವಿಧಾನಸಭಾ ಚುನಾವಣೆಯನ್ನೂ ನಾವು ಎದುರಿಸಲಿದ್ದೇವೆ . ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾವಣೆಯಿಲ್ಲ ಎಂದಿದ್ದಾರೆ.
ಈ ಬಗ್ಗೆ ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ಸಿಗರ ಇಂತಹ ಗಾಳಿಮಾತನ್ನು ಮತ್ತು ವದಂತಿಗಳನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ಸಿಗರು ಮೊದಲು ಆ ಪಕ್ಷದಲ್ಲಿರುವ ನಾಯಕತ್ವದ ಗುಂಪುಗಾರಿಕೆ ಮತ್ತು ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ ಸಾಕು ಎಂದು ವಾಗ್ದಾಳಿ ನಡೆಸಿದ್ದಾರೆ.