Political News: ಬೆಂಗಳೂರು: ಕರ್ನಾಟಕದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತ ವಿರೋಧಿ ಎಂಬುದಾಗಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಅಭಿಪ್ರಾಯಪಟ್ಟಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯ ಕುರಿತು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಬಳಕೆ ಆಗಬೇಕಾದ ಹಣವನ್ನು ಕಾಂಗ್ರೆಸ್ ನುಂಗಿಹಾಕಿದೆ. ಅದೇರೀತಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಬಳಸಬೇಕಾದ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ದೊಡ್ಡ ಪ್ರಮಾಣದಲ್ಲಿ 2 ಸಮುದಾಯಗಳಿಗೆ ಈ ಸರಕಾರ ಅನ್ಯಾಯ ಮಾಡಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದು ವಿವರಿಸಿದರು.
ಬಿಜೆಪಿ ಸರಕಾರ ಈ ವರ್ಗಗಳ ಮೀಸಲಾತಿಯನ್ನು ಜಾಸ್ತಿ ಮಾಡಿ ಅವರ ಕಲ್ಯಾಣಕ್ಕೆ ಮುಂದಾಗಿತ್ತು. ಆದರೆ, ಇವತ್ತಿನ ಕಾಂಗ್ರೆಸ್ ಸರಕಾರವು ದಲಿತರ ಹೆಸರನ್ನು ಹೇಳುತ್ತ ದಲಿತರ ಹಣವನ್ನು ನುಂಗಲು ಭ್ರಷ್ಟಾಚಾರದಲ್ಲಿ ನಿರತವಾಗಿದೆ; ಇದರ ಪ್ರಯತ್ನದ ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ ಅವರು ಇದ್ದರೆ, ಸಚಿವ ಸಂಪುಟವು ದಲಿತರ ಹಣವನ್ನು ನುಂಗಿ ಹಾಕಲು ಸಹಮತ ವ್ಯಕ್ತಪಡಿಸಿದ್ದು ವಿಷಾದದ ಸಂಗತಿ ಎಂದು ನುಡಿದರು.
ಇದು ಹಗರಣಗಳ ಸರಕಾರ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಗರಣ, ಕಾರ್ಮಿಕ ಇಲಾಖೆಯ ಹಗರಣ- ಇದು ಹಗರಣಗಳ ಸರಮಾಲೆಯ ಮತ್ತು ಅಭಿವೃದ್ಧಿ ಶೂನ್ಯವಾದ ಸರಕಾರ ಎಂದು ಟೀಕಿಸಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಪ್ರಮುಖರು ಇದ್ದರು.