Political News: ರಾಜ್ಯದಲ್ಲಿ 3.65 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯದ ಆರ್ಥಿಕ ಸ್ಥಿತಿ ದಿಕ್ಕು ತಪ್ಪಿದ್ದು, ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ದಾರಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಅರ್ಹರನ್ನು ಅನರ್ಹತೆಯ ಹೆಸರಿನಲ್ಲಿ ಆದಾಯದ ಅಳತೆಗೋಲನ್ನು ಹಿಡಿದುಕೊಂಡು ಬಿಪಿಎಲ್ ಕಾರ್ಡ್ ಸವಲತ್ತಿನಿಂದ ವಂಚಿತರನ್ನಾಗಿಸುವುದು ಅತ್ಯಂತ ಖಂಡನೀಯ. ರಾಜ್ಯದ ಆರ್ಥಿಕ ಸ್ಥಿತಿ ದಿಕ್ಕು ತಪ್ಪಿದ್ದು, ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ದಾರಿ ಹುಡುಕುತ್ತಿದೆ ಎಂದು ವಿಜಯೇಂದ್ರ ಬರೆದಿದ್ದಾರೆ.
ಅದರ ಮುಂದುವರಿದ ಭಾಗವಾಗಿ ಬಿಪಿಎಲ್ ಕಾರ್ಡುದಾರದ ಮೇಲೆ ಕೆಂಗಣ್ಣು ಬೀರಿ 3.65 ಲಕ್ಷಕ್ಕೂ ಹೆಚ್ಚು ಕಾರ್ಡುದಾರರ ಸೌಲಭ್ಯವನ್ನು ರದ್ದು ಮಾಡಿದೆ. ಈ ಅನಿರೀಕ್ಷಿತ ಬೆಳವಣಿಗೆ ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಪತ್ತೆ ಹಚ್ಚುವುದಲ್ಲ, ಬದಲಾಗಿ ಬಡತನದ ರೇಖೆಗಿಂತ ಕೆಳಗಿರುವ ಕಡು ಬಡವರ ಸೌಲಭ್ಯವನ್ನು ಕಸಿದು ಅನ್ನದ ದಾರಿಗೆ ಕಲ್ಲು ಹಾಕುವ ನಿರ್ದಯ ನಿರ್ಣಯವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಅನರ್ಹರನ್ನು ತಡೆಯುವ ಹೆಸರಿನಲ್ಲಿ ‘ಬಿಪಿಎಲ್ ಕಾರ್ಡುದಾರರನ್ನು ಇಳಿಮುಖಗೊಳಿಸಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡುದಾರರ ರದ್ದತಿಯ ಹಿಂದೆ ಅಡಗಿದೆ’ ಎಂಬುದು ರಾಜ್ಯ ಸರ್ಕಾರದ ಈ ನಿರ್ಧಾರದಿಂದ ವೇದ್ಯವಾಗುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.