ಕಲಬುರಗಿ : ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿರುವಾಗಲೇ ಶಾಸಕರಲ್ಲಿ ಈಗಿನಿಂದಲೇ ಮಂತ್ರಿಗಿರಿಯ ಕನಸು ಚಿಗುರೊಡೆಯುತ್ತಿದೆ. ಸಚಿವ ಸಂಪುಟ ಪುನಾರಚನೆ ಮಾಡುವುದಿಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದರೂ ಕೂಡ ಶಾಸಕರ ಅಧಿಕಾರ ದಾಹ ತೀರುತ್ತಿಲ್ಲ. ಇನ್ನೂ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಆರು ಸಚಿವ ಸ್ಥಾನ ನೀಡಿದ್ದರೂ ಸಹ ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಮಂತ್ರಿಗಿರಯ ಆಸೆಯನ್ನು ಹೊರಹಾಕಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿರುವ ಅವರು, ಈಗಾಗಲೇ ನಮ್ಮ ಹೈಕಮಾಂಡ್ ನಾಯಕರು ಅಕ್ಟೋಬರ್ ತಿಂಗಳಲ್ಲಿ ಸಂಪುಟ ಪುನಾರಚನೆ ಆಗುತ್ತದೆ ಎಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಹೇಳಿದ್ದಾರೆ. ಎಷ್ಟು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಾರಿ ನನಗೆ ಮಂತ್ರಿಸ್ಥಾನ ಸಿಕ್ಕೇ ಸಿಗುತ್ತದೆ. ಆ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ.
ನಾವು ನಮ್ಮ ತಂದೆಯ ರಾಜಕೀಯದ ಅವಧಿಯಿಂದಲೂ ತೀರ ಶಾಂತವಾಗಿದ್ದೇವೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದಾಗ ಮರು ಮಾತನಾಡದೆ ಸ್ಥಾನ ಬಿಟ್ಟುಕೊಟ್ಟಿದ್ದರು. ನಾವು ಮೊದಲಿನಿಂದಲೂ ಪಕ್ಷಕ್ಕೆ ನಿಷ್ಟರಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಈ ಸಲ ಸಚಿವ ಸ್ಥಾನ ಸಿಗುತ್ತದೆ. ಇಲ್ಲಿಯವರೆಗೂ ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಹೀಗಾಗಿ ಪಕ್ಷ ಮಂತ್ರಿ ಸ್ಥಾನ ನೀಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತಲೂ ಸಹ ತಿಳಿಸಿದ್ದಾರೆ. ಅವರೆಲ್ಲ ಹೇಳಿದ ಮೇಲೆ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಡಾ. ಅಜಯ್ ಸಿಂಗ್ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸದ್ಯದ ರಾಜಕೀಯದ ಬೆಳವಣಿಗೆಯ ಬಳಿಕ ಸಚಿವ ಸಂಪುಟ ಪುನಾರಚನೆಯಾದರೆ ಅಜಯ್ ಸಿಂಗ್ ಮಂತ್ರಿಯಾಗುಯತ್ತಾರಾ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.