ಕೇರಳದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ಮೂರು ವರ್ಷಗಳಿಂದ ತನಗೆ ಆಕ್ಷೇಪಾರ್ಹ ಸಂದೇಶ ಕಳಿಸುತ್ತಿದ್ದಾರೆ. ಅಲ್ಲದೇ ತನ್ನನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆಯುತ್ತಿದ್ದಾರೆ ಎಂದು ಮಲಯಾಳಂ ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ. ಇತ್ತ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟಿತಲ್ ಪಾತ್ರವೇ ಇರುವುದಾಗಿ ಬಿಜೆಪಿ ಆರೋಪ ಮಾಡಿದೆ.
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ ಮತ್ತು ಅನುಚಿತ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ಕೇರಳ ಶಾಸಕ ರಾಹುಲ್ ಮಮ್ಕೂಟಿತಲ್, ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಉಪಚುನಾವಣೆ ಮೂಲಕ ಆಯ್ಕೆಯಾದ ಪಾಲಕ್ಕಾಡ್ ಶಾಸಕ ಮಮ್ಕೂಟಿತಲ್, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು ಮತ್ತು ತಮ್ಮ ಪಕ್ಷವನ್ನು ರಕ್ಷಿಸಲು ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಬೇಕಾದ ಸಾಮಾನ್ಯ ಪಕ್ಷದ ಕಾರ್ಯಕರ್ತರ ಸಮಯವನ್ನು ವ್ಯರ್ಥ ಮಾಡದಿರಲು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿರುವ ಮಮ್ಕೂಟಿತಲ್, ನನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಾನು ತಿರಸ್ಕರಿಸುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ಜನಪ್ರಿಯವಾಗಿಲ್ಲದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸಬೇಕಾದ ಸಮಯದಲ್ಲಿ, ಅವರು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ನನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಸಮಯ ವ್ಯರ್ಥ ಮಾಡಬೇಕಾಗಿಲ್ಲ ಎಂಬ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಮುಗ್ಧತೆಯನ್ನು ಸಾಬೀತುಪಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದಾರೆ.
ಇನ್ನು ರಿನಿ ಆನ್ ಜಾರ್ಜ್.. ಮಲಯಾಳಂನ ಚೆಲುವೆ. 916 ಕುಂಜೂಟ್ಟನ್ ಎಂಬ ಮಲಯಾಳಿ ಚಿತ್ರದಲ್ಲಿ ಅಭಿನಯಿಸಿರುವ ರಿನಿ ಹಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ರಿನಿ ಕೇವಲ ನಟಿ ಮಾತ್ರ ಅಲ್ಲ ಪತ್ರಕರ್ತೆಯೂ ಹೌದು. ಜರ್ನಲಿಸ್ಟ್ ಆಗಿ ಕೂಡ ಹೆಸರು ಮಾಡಿರುವ ರಿನಿ ಆನ್ ಜಾರ್ಜ್‌ಗೆ ರಾಜಕಾರಣಿಗಳ ಸಖ್ಯ ಕೂಡ ಇದೆ.
ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ನನಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ. ಫೈವ್ ಸ್ಟಾರ್ ಹೋಟೆಲ್‌ಗೆ ಬರುವಂತೆ ಕರೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಕ್ಷದ ನಾಯಕರಿಗೆ ತಿಳಿಸುವುದಾಗಿ ಹೇಳಿದ್ರೆ, ಅವರು ಹೇಳಿ ಅಂತಾ ಸವಾಲ್ ಹಾಕಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ದೂರು ನೀಡಿದ್ರೆ ನಿರ್ಲಕ್ಷ್ಯ ಮಾಡಿದ್ದಾರೆ. ದೂರು ನೀಡಿದ ಬಳಿಕವೂ ಅವರಿಗೆ ಪಕ್ಷದೊಳಗೆ ಪ್ರಮುಖ ಹುದ್ದೆಯನ್ನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ನನ್ನೊಬ್ಬಳ ಸಮಸ್ಯೆಯಲ್ಲ, ಹಲವಾರು ರಾಜಕಾರಣಿಗಳ ಪತ್ನಿಯರು ಹಾಗೂ ಹೆಣ್ಣುಮಕ್ಕಳೂ ತಮ್ಮೊಂದಿಗೆ ಈ ರೀತಿಯ ಅನುಭವ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿನ ಮಹಿಳೆಯರನ್ನೇ ರಕ್ಷಿಸಲು ಸಾಧ್ಯವಾಗದ ಈ ರಾಜಕಾರಣಿಗಳು ಯಾವ ಮಹಿಳೆಯನ್ನ ರಕ್ಷಿಸಲು ಸಾಧ್ಯ? ಅಂತಲೂ ರಿನಿ ಪ್ರಶ್ನೆ ಮಾಡಿದ್ದಾರೆ
ಅಲ್ಲದೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಮಹಿಳೆಯರು ಈ ರೀತಿಯ ಸಮಸ್ಯೆಗಳನ್ನ ಎದುರಿಸ್ತಿರೋದನ್ನ ನೋಡಿದ್ದೇನೆ. ಆದ್ರೆ ಯಾಕೆ ಯಾರೊಬ್ಬರೂ ಅದರ ಬಗ್ಗೆ ಒಂದು ಮಾತೂ ಆಡ್ತಿಲ್ಲ ಅಂತ ಯೋಚನೆ ಬಂತು. ಅವರೆಲ್ಲರ ಪರವಾಗಿ ನಾನು ದನಿ ಎತ್ತಲು ನಿರ್ಧರಿಸಿದೆ. ಅದಕ್ಕಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತೆಯೂ ಆಗಿರುವ ನಟಿ ರೀನಿ, ತನಗೆ ಅಶ್ಲೀಲ ಸಂದೇಶ ಕಳಿಸಿದ ರಾಜಕಾರಣಿಯ ಹೆಸರು ಬಹಿರಂಗಪಡಿಸಿಲ್ಲ. ಆದ್ರೆ ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟಿತಲ್ ವಿರುದ್ಧ ಬಿಜೆಪಿ ಆರೋಪ ಮಾಡಿದೆ. ಶಾಸಕನ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜೀನಾಮೆಗೂ ಒತ್ತಾಯಿಸಿದ್ರು. ಇದೀಗ ಮಮ್ಕೂಟಿತಲ್ ರಾಜೀನಾಮೆ ಕೊಟ್ಟಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ