Tuesday, September 16, 2025

Latest Posts

ಮಂತ್ರಿಗಿರಿಯ ಮೇಲೆ ಕಣ್ಣೀಟ್ಟವರಿಗೆ ಸಲೀಂ ಅಹ್ಮದ್‌ ಗುಡ್‌ ನ್ಯೂಸ್! : ಸಂಪುಟ ವಿಸ್ತರಣೆ ಯಾವಾಗ ಗೊತ್ತಾ?

- Advertisement -

ಹಾವೇರಿ : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆ, ನಾನು ಯಾವತ್ತು ಮಂತ್ರಿಯಾಗುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ಶಾಸಕರಿಗೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಗುಡ್‌ ನ್ಯೂಸ್‌ ನೀಡಿದ್ದಾರೆ. ಈ ಮೂಲಕ ಈಗಿನಿಂದಲೇ ಕಾಂಗ್ರೆಸ್‌ ಶಾಸಕರಲ್ಲಿ ಮಂತ್ರಿಗಿರಿಯ ಕನಸು ಚಿಗುರುವಂತೆ ಮಾಡಿದ್ದಾರೆ.

ಇನ್ನೂ ಈ ಕುರಿತು ಹಾವೇರಿಯಲ್ಲಿ ಮಾತನಾಡಿರುವ ಅವರು, ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಗುತ್ತಿದೆ. ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯ ವೇಳೆ ಹೊಸಬರಿಗೆ ಅವಕಾಶ ನೀಡುವ ಸಂಭವವಿದೆ. ಆದರೆ ಕೊನೆಯದಾಗಿ ಈ ನಿರ್ಧಾರವನ್ನು ಸಿಎಂ ಹಾಗೂ ಹೈಕಮಾಂಡ್‌ನವರು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಸಚಿವರ ಬೇಡಿಕೆಯ ಕುರಿತು ನನಗೆ ಮಾಹಿತಿ ಇಲ್ಲ. ಈಗಾಗಲೇ ನಮ್ಮ ಪಕ್ಷದ ವರಿಷ್ಠರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಸ್ಥಾನ, ಕೆಪಿಸಿಸಿ ಹುದ್ದೆಯ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ನಾವು ಇದರ ಬಗ್ಗೆ ಏನೂ ಮಾತನಾಡಲ್ಲ ಎಂದು ಸಲೀಂ ಅಹ್ಮದ್‌ ತಿಳಿಸಿದ್ದಾರೆ.

ನಮ್ಮ ಎಐಸಿಸಿ ಅಧ್ಯಕ್ಷರು ಸೇರಿದಂತೆ ಹಲವು ಕಮಿಟಿಗಳಲೆಲ್ಲಾ ಕಾಂಗ್ರೆಸ್ ಹೈಕಮಾಂಡ್‌ನ ಪಾತ್ರ ಇರುತ್ತದೆ. ನಮ್ಮದು ಬಿಜೆಪಿ ರೀತಿ ನರೇಂದ್ರ ಮೋದಿ ಪಾರ್ಟಿ ಅಲ್ಲ, ಪ್ರಜಾಪ್ರಭುತ್ವವನ್ನು ಹೊಂದಿರುವ ಪಾರ್ಟಿಯಾಗಿದೆ. ಮೋದಿ ಅವರು ಹೇಳಿದರೆ ಅರ್ಧ ಗಂಟೆಯಲ್ಲಿ ಆಗುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತದೆ, ವಿಶ್ಲೇಷಣೆ ಮಾಡಲಾಗುತ್ತದೆ. ಬಿಜೆಪಿಯಲ್ಲಿ ಸರ್ವಾಧಿಕಾರಿ ಇದ್ದಾರೆ. ನಮ್ಮಲ್ಲಿ ಆ ರೀತಿ ಇಲ್ಲ ಎಂದು ಟೀಕಿಸಿದ್ದಾರೆ. ಇನ್ನೂ ಸಲೀಂ ಅಹ್ಮದ್‌ ಹೇಳಿರುವಂತೆ ಮುಂಬರುವ ನವೆಂಬರ್‌ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆಯತ್ತ ಎಲ್ಲರ ಚಿತ್ತ ನೆಡುತ್ತಿದೆ. ಆದರೆ ಅಂತಿಮವಾಗಿ ಯಾರಿಗೆ ಸಿಹಿ ಹಾಗೂ ಇನ್ಯಾರಿಗೆ ಕಹಿ ಎನ್ನುವುದಕ್ಕೆ ಹೈಕಮಾಂಡೇ ಉತ್ತರಿಸಬೇಕಿದೆ.

- Advertisement -

Latest Posts

Don't Miss