Political News: ಸಚಿವ ಸಂತೋಷ್ ಲಾಡ್ ಅವರು ಮದ್ದೂರಿನಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಿ, ಬಿಜೆಪಿಗರಿಗೆ ಹಿಂದೂ ಮುಸ್ಲಿಂ ಗಲಾಟೆ ಬಿಟ್ಟರೆ ಬೇರೆ ಟಾಪಿಕ್ ಇಲ್ಲಾ. ಪಹಲ್ಗಾಮ್ ದಾಳಿ ನಡೆದು, ಕೆಲ ತಿಂಗಳಾಯ್ತು. ಅದಾಗಲೇ ಪಾಕಿಸ್ತಾನ್ ಮತ್ತು ಭಾರತದ ನಡುವೆ ಮ್ಯಾಚ್ ಬೇಕಿತ್ತಾ ಅಂತಾ ಪ್ರಶ್ನಿಸಿದ್ದರು. ಅಲ್ಲದೇ ಭಾರತದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ, ಮುಸ್ಲಿಂರಿಗೂ ಅಷ್ಟೇ ಹಕ್ಕಿದೆ ಎಂದಿದ್ದರು.
ಇದಕ್ಕೆ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಟಾಂಗ್ ನೀಡಿದ್ದಾರೆ. ಸಚಿವ ಸಂತೋಷ್ ಲಾಡ್ ಅವರೇ, ಪಾಪ ನಿಮಗೆ ನಿಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಸಂಪೂರ್ಣವಾಗಿ ಅರಿವಿದ್ದಂತಿಲ್ಲ. “ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರು ಹೊಂದಿರಬೇಕು”: ಎಂದು ಸ್ವತಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದರು ಎಂದು ವೀಡಿಯೋ ಸಮೇತ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಹೀಗೆಲ್ಲ ನಿಮ್ಮ ಪಕ್ಷದ ಸಿದ್ಧಾಂತದ ವಿರುದ್ಧ ಮಾತನಾಡಿದರೆ ರಾಹುಲ್ ಗಾಂಧಿ ಅವರಿಗೆ ಕೋಪ ಬಂದು ಸಿಎಂ ಸಿದ್ದರಾಮಯ್ಯನವರಿಗೆ ಫೋನು ಮಾಡಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮುಲಾಜಿಲ್ಲದೆ ಸಂಪುಟದಿಂದ ವಜಾ ಮಾಡಿದಂತೆ ತಮ್ಮನ್ನೂ ಸಂಪುಟದಿಂದ ವಜಾ ಮಾಡಿಬಿಟ್ಟಾರು, ಹುಷಾರ್! ಕಾಂಗ್ರೆಸ್ ಪಕ್ಷ ಅಂದರೆ ಆಧುನಿಕ ಮುಸ್ಲಿಂ ಲೀಗ್. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ತಮ್ಮ ಕುರ್ಚಿ ಉಳಿಸಿಕೊಳ್ಳಿ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

