RSS ಬಗ್ಗೆ ಸರ್ದಾ‌ರ್ ಉಲ್ಲೇಖವನ್ನು ಪ್ರಧಾನಿಗೆ ನೆನಪಿಸಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ದೇಶ ನಿರ್ಮಾಣದಲ್ಲಿ ಆರ್‌ಎಸ್‌ಎಸ್ ಪಾತ್ರವನ್ನು ಶ್ಲಾಘಿಸಿದ್ದರೂ, ಕಾಂಗ್ರೆಸ್ ಪಕ್ಷವು RSS ಸಂಘದ ಚಟುವಟಿಕೆಗಳು ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿದೆ ಎಂದು ನೆನಪಿಸಿದೆ.

ಈ ಸಂಬಂಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಪ್ರಧಾನಿ ಬುಧವಾರ ಬೆಳಿಗ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, 1948ರ ಜುಲೈ 18 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ ವ್ಯಕ್ತಪಡಿಸಿರುವ ಆಕ್ರೋಶವನ್ನು ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪಟೇಲ್ ಪತ್ರದಲ್ಲಿ ಬರೆದಿದ್ದಂತೆ, ಹಿಂದೂ ಮಹಾಸಭಾದ ತೀವ್ರವಾದಿಗಳು ಗಾಂಧಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶ ಮತ್ತು ಸರ್ಕಾರದ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ. ನಿಷೇಧದ ಹೊರತಾಗಿಯೂ ಆರ್‌ಎಸ್‌ಎಸ್ ಕಾರ್ಯಾಚರಿಸುತ್ತಿದೆ.

ಅಲ್ಲದೇ 1948ರ ಡಿಸೆಂಬರ್ 19ರಂದು ಜೈಪುರದ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪಟೇಲ್ ಅವರು, ದೇಶವನ್ನು ಗುಲಾಮಗಿರಿ ಅಥವಾ ವಿಘಟನೆಯ ಹಾದಿಗೆ ತಳ್ಳಲು ಆರ್‌ಎಸ್‌ಎಸ್‌ ಅಥವಾ ಯಾವುದೇ ಇತರ ಕೋಮು ಸಂಘಟನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಮರುದಿನ ಹಿಂದೂಸ್ತಾನ್ ಟೈಮ್ಸ್’ನಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯ ಪ್ರತಿಯನ್ನು ಜೈರಾಮ್ ರಮೇಶ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author