Political News: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಸಮಸ್ಯೆಯನ್ನು ಕಾಂಗ್ರೆಸ್ ಸರ್ಕಾರ ಸರಿಯಾಗಿ ಆಲಿಸುತ್ತಿಲ್ಲವೆಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಎಂಬುವುದೇ ಮರೀಚಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯ ಅವಾಂತರದಿಂದ ರಕ್ಷಿಸಲು ಸಾಮರ್ಥ್ಯವಿಲ್ಲದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಮುಳುಗಿ ತನ್ನ ಬೊಕ್ಕಸ ಬರಿದಾಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದೇ ಈ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡು ಬಹುತೇಕ ಕಾಮಗಾರಿಗಳು ಅರ್ಧಕ್ಕೇ ನಿಂತು ಹೋಗಿವೆ, ರೈತರ ಜಮೀನುಗಳಿಗೆ ನೀರು ನುಗ್ಗಿ ಕೈ ಸೇರಬೇಕಿದ್ದ ಬೆಳೆಗಳು ನಾಶವಾಗಿವೆ, ಗುಂಡಿಬಿದ್ದ ರಸ್ತೆಗಳು, ಟ್ರಾಫಿಕ್ ಸಮಸ್ಯೆಗಳು, ಮನೆಗಳಿಗೆ ನುಗ್ಗುತ್ತಿರುವ ಚರಂಡಿ ನೀರು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯ ನಡುವೆ ಮಳೆಯ ತತ್ತರಕ್ಕೆ ಸಿಲುಕಿ ನಲುಗುತ್ತಿರುವ ನಾಡಿನ ರೈತರು ಹಾಗೂ ಸಾರ್ವಜನಿಕರ ಸ್ಥಿತಿಯನ್ನು ಕಂಡು ಅತ್ಯಂತ ವ್ಯಥೆಯಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಸಂಕಷ್ಟಿತ ಜನರಿಗೆ ಪರಿಹಾರ ಕಾರ್ಯ ಚುರುಕುಗೊಳಿಸಿ, ಬೆಳೆ ಹಾನಿಯಾಗಿ ಚಿಂತೆಗೀಡಾಗಿರುವ ರೈತ ಸಮುದಾಯಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿ. ಮಳೆಯ ಅವಾಂತರದ ಸ್ಥಿತಿಯನ್ನು ನಿಭಾಯಿಸುವಲ್ಲಿ ಉಡಾಫೆತನ ಮುಂದುವರಿಸಿದಲ್ಲಿ ಇದರ ಪರಿಣಾಮದ ಜನಾಕ್ರೋಶದ ಸಹನೆಯ ಕಟ್ಟೆಯೊಡೆದರೆ ಕಾಂಗ್ರೆಸ್ ಸರ್ಕಾರ ಅದರಲ್ಲಿ ಕೊಚ್ಚಿ ಹೋಗಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.