Friday, August 29, 2025

Latest Posts

ನಿರಂತರ ಮಳೆ: ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಭೇಟಿ

- Advertisement -

Dharwad News: ಧಾರವಾಡ : “ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಜಿಲ್ಲೆಯ ವಿವಿಧ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ‌ ಹಾನಿಯಾಗಿದೆ. ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ಮುಂಗಾರು ಬೆಳೆಗಳನ್ನು ಬಿತ್ತಿದ್ದ ರೈತರು ಭಾರೀ ನಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದೆ. ಬೆಳೆ ವಿಮೆ ಕಂಪನಿ ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ವಿಮಾ ಕಂಪನಿಯ ಕೆಲವು ನಿಯಮ‌ ಬದಲಾವಣೆ ಬಗ್ಗೆ ಸಭೆ ನಡೆಸಲಾಗುವುದು” ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು.

ಮಳೆಯಿಂದ ಹಾನಿಯಾದ ನವಲಗುಂದ ಪಟ್ಟಣದ ಮನೆಗಳು, ನಾಯಕನೂರ ಗ್ರಾಮದ ಹೊಲಗಳಲ್ಲಿನ ಹೆಸರು ಮತ್ತು ಈರುಳ್ಳಿ ಬೆಳೆಯನ್ನು ಸಚಿವರು ಇಂದು ಪರಿಶೀಲಿಸಿದರು.

ಅಣ್ಣಿಗೇರಿ ತಾಲೂಕಿನ ಮಣಕವಾಡ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಾನಿಯಾಗಿರುವುದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿಯೂ ಹಾನಿಗೊಳಗಾಗಿರುವ ಹೆಸರು, ಉದ್ದು, ಶೇಂಗಾ, ಈರುಳ್ಳಿ ಹಾಗೂ ಇತರ ಬೆಳೆಗಳ ಹಾನಿ ಪ್ರದೇಶಗಳನ್ನು ಪರಿವೀಕ್ಷಿಸಲಾಯಿತು. ಜೊತೆಗೆ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ತಡಹಾಳ ಗ್ರಾಮದ ಸೇತುವೆಯನ್ನು ಇದೇ ವೇಳೆ ವೀಕ್ಷಿಸಿದರು.

ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಭಾರಿ ಮಳೆಗೆ ಹೆಚ್ಚಿನ ಬೆಳೆಯಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಳೆಯಿಂದಾಗಿ ಮನೆಗಳು ಕುಸಿದು ಬಿದ್ದಿದ್ದು, ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದರಿಂದ ಬೆಳೆಗಳು ಕೊಳೆಯಲಾರಂಭಿಸಿವೆ. ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನವಲಗುಂದ ಪಟ್ಟಣದ ಗುಡ್ಡದಕೇರಿ ಓಣಿಯಲ್ಲಿನ ದ್ಯಾಮವ್ವ ಬಣ್ಣೆಣ್ಣನವರ ಎಂಬವರ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿತ್ತು. ಬಿದ್ದ ಮನೆ ವೀಕ್ಷಣೆ ಮಾಡಿದ ಸಚಿವ ಲಾಡ್ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಸಚಿವರಿಗೆ ಗ್ರಾಮಸ್ಥರ ಅಳಲು
ನವಲಗುಂದ ಭಾಗದಲ್ಲಿ ಹೆಸರು, ಈರುಳ್ಳಿ ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವ ರೈತರು ಸಚಿವರ ಮುಂದೆ ಅಳಲನ್ನು ತೋಡಿಕೊಂಡರು. “ಸಾಲಸೋಲ ಮಾಡಿ ಬೆಳೆ ಹಾಕಿದ್ದೆವು. ಈಗ ನೋಡಿದರೆ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿವೆ. ಸರ್ಕಾರದಿಂದ ಪರಿಹಾರ ಕೊಡಿಸಬೇಕು” ಎಂದು ಮನವಿ ಮಾಡಿದರು.

ತಡಹಾಳ ಗ್ರಾಮದ ಸೇತುವೆ ಪರಿಶೀಲನೆ
ತಡಹಾಳ ಬಳಿಯ ಬೆಣ್ಣೆಹಳ್ಳದಿಂದ ಉಂಟಾಗಿರುವ ನಷ್ಟದ ಕುರಿತು ಮಾತನಾಡಿದ ಸಚಿವರು, ಸೇತುವೆ ಹಳೆಯದಾಗಿದೆ. ಇದನ್ನು ಮೇಲ್ದರ್ಜೆಗೇರಿಸಲಾಗುವುದು. ಸದ್ಯ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಬೆಣ್ಣೆಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಾಣ ಮಾಡುವ ಕುರಿತು ಭರವಸೆ ನೀಡಿದರು.

ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸೇತುವೆ ಹಾನಿಯಾಗಿದ್ದರಿಂದ ನರಗುಂದ ಹಾಗೂ ನವಲಗುಂದ ತಾಲೂಕಿನ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು.

ಕಳೆದ ಒಂದು ತಿಂಗಳ ಹಿಂದಷ್ಟೇ ಸೇತುವೆ ದುರಸ್ತಿ ಮಾಡಲಾಗಿತ್ತು. ಈ ಮುಂಚೆಯೂ ಸೇತುವೆ ಇದೇ ರೀತಿ ಕೊಚ್ಚಿಕೊಂಡು ಹೋಗಿತ್ತು. ಕೊಚ್ಚಿ ಹೋದ ಸೇತುವೆಯಿಂದ ಜನರಿಗೆ ಸಂಕಷ್ಟ ಎದುರಾಗಿತ್ತು.

ಭೇಟಿ ವೇಳೆ ಸಚಿವರಿಗೆ ನವಲಗುಂದ ಕ್ಷೇತ್ರದ ಶಾಸಕ ಎನ್. ಹೆಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಾಥ್ ನೀಡಿದರು.

- Advertisement -

Latest Posts

Don't Miss